
ಕೋಲ್ಕತ್ತಾ: ಬಾಂಗ್ಲಾದೇಶದಿಂದ ಭಾರತಕ್ಕೆ 1.1 ಕೋಟಿ ರೂ. ಮೌಲ್ಯದ 10 ಚಿನ್ನದ ಬಿಸ್ಕೆಟ್ ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಬ್ಬರನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಹಕೀಂಪುರ ಪ್ರದೇಶದ ಮೂಲಕ ಚಿನ್ನ ಕಳ್ಳಸಾಗಣೆಯ ಬಗ್ಗೆ ಮಾಹಿತಿ ಪಡೆದ ನಂತರ ದಕ್ಷಿಣ ಬಂಗಾಳ ಗಡಿನಾಡಿನ 143 ಬೆಟಾಲಿಯನ್‌ನ ಬಿಎಸ್‌ಎಫ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಹಕೀಂಪುರ ಉತ್ತರಪಾರ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಯೋಧರು, ಅವರನ್ನು ತಡೆದು ಶೋಧ ನಡೆಸಿದಾಗ, ಅವರ ಬಳಿ 1.167 ಕೆಜಿ ತೂಕದ ಹತ್ತು ಚಿನ್ನದ ಬಿಸ್ಕೆಟ್ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ನಿನ್ನೆ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ನಾಡಿಯಾ ಜಿಲ್ಲೆಯ 32ನೇ ಬೆಟಾಲಿಯನ್ ಮತ್ತು ಉತ್ತರ 24 ಪರಗಣದಲ್ಲಿರುವ 143ನೇ ಬೆಟಾಲಿಯನ್‌ನ ಯೋಧರು 41 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಗಾಂಜಾ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement