
ಪೂಂಚ್: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನಲ್ಲಿ ಇತ್ತೀಚೆಗೆ ಪಾಕಿಸ್ತಾನಿ ಪಡೆಗಳು ನಡೆಸಿದ ಗಡಿಯಾಚೆಗಿನ ಶೆಲ್ ದಾಳಿಯ ಸಮಯದಲ್ಲಿ ಬಿಜೆಪಿ ನಾಯಕ ಪ್ರದೀಪ್ ಶರ್ಮಾ ಬೀದಿಗೆ ಬಂದು (Man on the roads) ಗಾಯಾಳುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪ್ರದೀಪ್, ನಾಲ್ಕು ದಿನಗಳಿಂದ, ನಾನು ಮತ್ತು ನನ್ನ ತಂಡ ಬೀದಿಯಲ್ಲಿದ್ದೇವು. ಶೆಲ್ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾಗಿದ್ದಾಗಿ ತಿಳಿಸಿದರು.
ಮೇ 6 ಮತ್ತು 7 ರ ಮಧ್ಯರಾತ್ರಿಯಲ್ಲಿ ಶೆಲ್ ದಾಳಿ ಆರಂಭವಾಗುತ್ತಿದ್ದಂತೆಯೇ ಕುಟುಂಬದವರು ನನ್ನನ್ನು ಎಚ್ಚರಗೊಳಿಸಿತು. ದೊಡ್ಡ ಸ್ಫೋಟಗಳನ್ನು ಕೇಳುತ್ತಿದ್ದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಗಡಿಯಲ್ಲಿ ಸಿಕ್ಕಿಬಿದ್ದ ಜನರಿಗೆ ಸಹಾಯ ಮಾಡಲು ಏನಾದರೂ ಮಾಡಬೇಕೆಂದು ಯೋಚಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ತಲುಪಲು ನಿರ್ಧರಿಸಿದೆ. ಅಂದು 2.25ಕ್ಕೆ ಫೇಸ್ ಬುಕ್ ಲೈವ್ ನಲ್ಲಿ ಬಂದು ಜನರು ಮನೆಯೊಳಗೆ ಇರಲು ಮತ್ತು ಹೊರಗೆ ಹೋಗಬೇಡಿ ಎಂದು ಹೇಳಿದೆ. ನೆಲ ಮಹಡಿಗಳಿಗೆ ತೆರಳಿ, ಗಾಬರಿಯಾಗಬೇಡಿ, ಎಚ್ಚರದಿಂದಿರಿ ಎಂದು ಹೇಳಿದ್ದಾಗಿ ಬಿಜೆಪಿ ನಾಯಕರು ಹೇಳಿದರು.
ಗಡಿಯಾಚೆ ಶೆಲ್ ದಾಳಿ ನಡೆಯುತ್ತಿದ್ದಂತೆ, ಪೂಂಚ್ ಪಟ್ಟಣದ ಅರಣ್ಯ ಇಲಾಖೆ ಸಂಕೀರ್ಣದಲ್ಲಿ ಶೆಲ್ ದಾಳಿಯಿಂದ ಅರಣ್ಯಾಧಿಕಾರಿ ಗಾಯಗೊಂಡಿದ್ದರು. ಇದು ಪೊಂಚ್ ನಲ್ಲಾದ ಮೊದಲ ಶೆಲ್ ದಾಳಿ ಆಗಿತ್ತು. ಆ ಸ್ಥಳವು ನನ್ನ ನಿವಾಸಕ್ಕೆ ಸಮೀಪದಲ್ಲಿದ್ದರಿಂದ, ತಕ್ಷಣವೇ ನನ್ನ ಸಹೋದರನೊಂದಿಗೆ ಸ್ಕೂಟಿಯಲ್ಲಿ ಸ್ಥಳಕ್ಕೆ ತಲುಪಿ, ಗಾಯಗೊಂಡಿದ್ದ ಅರಣ್ಯಾಧಿಕಾರಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದೆ. ಸಮಯ ಕಳೆದಂತೆ ಪೂಂಚ್ ನ ವಿವಿಧ ಭಾಗಗಳಲ್ಲಿ ಹೆಚ್ಚಿನ ದಾಳಿ ಶೆಲ್ ದಾಳಿ ನಡೆದು ಮನೆಗಳಿಗೆ ಹಾನಿ ಸೇರಿದಂತೆ ಹಲವರು ಗಾಯಗೊಂಡರು ಎಂದು ಅವರು ತಿಳಿಸಿದರು.
ಮದರಸಾದ ವಿದ್ಯಾರ್ಥಿಗಳು, ಮೌಲ್ವಿಯನ್ನು ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ವೈರಲ್: ಪೂಂಚ್‌ನ ಸಿಂಡಿಕೇಟ್ ಪ್ರದೇಶದಲ್ಲಿ ಸಿಖ್ ಸಮುದಾಯದ ಮೂವರು ಸದಸ್ಯರು ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದೆ. ಆದರೆ ಗಾಯಾಳುಗಳಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮದರಸಾದಲ್ಲಿ (ಜಾಮಿಯಾ ಜಿಯಾ-ಉಲ್-ಉಲೂಮ್) ಶೆಲ್‌ನಿಂದ ಮೊಲ್ವಿ ಮೊಹಮ್ಮದ್ ಇಕ್ಬಾಲ್ ಮತ್ತು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗಾಯಗೊಂಡ ವಿದ್ಯಾರ್ಥಿಯೊಬ್ಬನಿಗೆ ನನ್ನ ಮಡಿಲಲ್ಲಿ ವೈದ್ಯರು ಚಿಕಿತ್ಸೆ ನೀಡಿದರು. ಆದರೆ ಮೌಲ್ವಿ ಮೊಹಮ್ಮದ್ ಇಕ್ಬಾಲ್ ಕೂಡ ಕೆಲವು ಇಸ್ಲಾಮಿಕ್ ಪದಗಳನ್ನು ಪಠಿಸಿದ ನಂತರ ನನ್ನ ಮಡಿಲಲ್ಲಿ ಸತ್ತರು ಎಂದು ಪ್ರದೀಪ್ ಹೇಳಿದರು. ಮದರಸಾದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಮೌಲ್ವಿಯನ್ನು ಆಸ್ಪತ್ರೆಗೆ ಕರೆದೊಯ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
"ಸ್ಫೋಟ ಸಂಭವಿಸಿದಲ್ಲೆಲ್ಲಾ ನಾನು ಅಲ್ಲಿಯೇ ಇದ್ದೆ. ಗಾಯಗೊಂಡಿದ್ದ ವ್ಯಕ್ತಿ ಮುಸ್ಲಿಂ, ಹಿಂದೂ ಅಥವಾ ಸಿಖ್ ಸಮುದಾಯದವರೇ ಎಂದು ನಾನು ನೋಡಿಲ್ಲ. ನನಗೆ ಮನುಷ್ಟ ಮುಖ್ಯ. ಮಾನವೀಯತೆಯ ಸೇವೆಗಿಂತ ದೊಡ್ಡ ಧರ್ಮವಿಲ್ಲ" ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ಮತ್ತು ಅಗತ್ಯವಿರುವವರಿಗೆ ನೆರವು ಸಿಗುವಂತೆ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ದುರಂತದ ಸಮಯದಲ್ಲಿ ಯಾರಾದರೂ ಧರ್ಮವನ್ನು ನೋಡಿದರೆ, ಅವರಿಗಿಂತ ಕೆಟ್ಟ ವ್ಯಕ್ತಿ ಇಲ್ಲ, ಜನರು ಸಾಯುವಾಗ ಅಥವಾ ಗಾಯಗೊಂಡಾಗ ನೀವು ಹಿಂದೂಗಳು, ಮುಸ್ಲಿಮರು, ಸಿಖ್ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಮಾತನಾಡುತ್ತಿದ್ದರೆ, ನಿಮಗೆ ಬದುಕುವ ಹಕ್ಕಿಲ್ಲ ಎಂದು ಬಿಜೆಪಿ ನಾಯಕ ಹೇಳಿದರು.
Advertisement