
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಗ್ರಾಮವಾದ ನಳಂದ ಜಿಲ್ಲೆಯ ಕಲ್ಯಾಣ್ ಬಿಘಾದಿಂದ ಭಾನುವಾರ ತಮ್ಮ ಪಕ್ಷದ ಸಹಿ ಅಭಿಯಾನ ಪ್ರಾರಂಭಿಸಲು ಯತ್ನಿಸಿದ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಪೊಲೀಸರು ತಡೆದಿದ್ದಾರೆ.
ಪೊಲೀಸ್ ತಂಡದ ನೇತೃತ್ವ ವಹಿಸಿದ್ದ ಉಪವಿಭಾಗೀಯ ಅಧಿಕಾರಿಯೊಂದಿಗೆ ಕಿಶೋರ್ ಮಾತಿನ ಚಕಮಕಿ ನಡೆಸಿದರು.
"ಗ್ರಾಮಕ್ಕೆ ಪ್ರವೇಶಿಸಲು ನನಗೆ ನಿಮ್ಮ ಅನುಮತಿ ಬೇಕೇ? ನಾನು ಗ್ರಾಮಕ್ಕೆ ಪ್ರವೇಶಿಸುವುದನ್ನು ನೀವು ಹೇಗೆ ತಡೆಯುತ್ತೀರಿ? ನೀವು ನನಗೆ ಗ್ರಾಮ ಪ್ರವೇಶಿಸಲು ಅವಕಾಶ ನೀಡದಿದ್ದರೆ, ನಿರ್ಬಂಧ ವಿಧಿಸಬೇಕು" ಎಂದು ಪ್ರಶಾಂತ್ ಕಿಶೋರ್ ಉಪವಿಭಾಗೀಯ ಅಧಿಕಾರಿಗೆ ಹೇಳಿದರು.
ನಾನು ಯಾವುದೇ ಕಾನೂನು ಉಲ್ಲಂಘಿಸುತ್ತಿಲ್ಲ ಎಂದು ಪ್ರತಿಪಾದಿಸಿದ ಕಿಶೋರ್, "ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಇದೆಯೇ? ನನ್ನೊಂದಿಗೆ ಬರುವ ಜನ ಕಾನೂನು ಪಾಲಿಸುವ ನಾಗರಿಕರು. ಅವರಲ್ಲಿ ಕೆಲವರು ನಿಮಗಿಂತ ಹೆಚ್ಚು ಅರ್ಹರು". ನೀವು ನನ್ನನ್ನು ತಡೆಯಲು ಲಿಖಿತವಾಗಿ ಕಾರಣ ನೀಡಿದರೆ, ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.
ಆದಾಗ್ಯೂ, ಆ ಅಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯ ಕಾರಣವಾಗಿಟ್ಟುಕೊಂಡು ಜನ ಸುರಾಜ್ ಪಕ್ಷದ ಸಂಸ್ಥಾಪಕರನ್ನು ಗ್ರಾಮಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ. "ನನಗೆ ಯಾವುದೇ ರಹಸ್ಯ ಉದ್ದೇಶವಿದ್ದರೆ, ನಾನು ನಿಮ್ಮನ್ನು ಬಿಹಾರ್ಷರೀಫ್‌ನಲ್ಲಿಯೇ ನಿಲ್ಲಿಸುತ್ತಿದ್ದೆ. ಆದರೆ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಬಗ್ಗೆ ನನಗೆ ವರದಿಗಳು ಬಂದಿವೆ" ಎಂದು ಅಧಿಕಾರಿ ಕಿಶೋರ್‌ಗೆ ತಿಳಿಸಿದರು.
Advertisement