
ಮುಂಬೈ: ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗವನ್ನು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಹಿಷ್ಕರಿಸಬೇಕಿತ್ತು ಎಂದು ಭಾನುವಾರ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಸಂಸದ ಸಂಜಯ್ ರಾವತ್ ಅವರು ಹೇಳಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ರಾವತ್, ಸರ್ಕಾರವು ಮಾಡಿದ 'ಪಾಪಗಳು ಮತ್ತು ಅಪರಾಧ'ವನ್ನು ಈ ಸರ್ವಪಕ್ಷ ನಿಯೋಗವು ಸಮರ್ಥಿಸಿಕೊಳ್ಳುತ್ತದೆ ಎಂದು ತಿಳಿಸಿದರು.
"ಸರ್ಕಾರದಿಂದ ಹಣಕಾಸು ಒದಗಿಸಲ್ಪಟ್ಟ ಈ ರೀತಿಯ ನಿಯೋಗವನ್ನು ಕಳುಹಿಸುವ ಅಗತ್ಯವಿರಲಿಲ್ಲ. ಸಂಸದರು ಏನು ಮಾಡುತ್ತಾರೆ? ನಮಗೆ ವಿದೇಶಗಳಲ್ಲಿ ನಮ್ಮ ರಾಯಭಾರಿಗಳಿದ್ದಾರೆ. ಅವರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. INDIA ಬಣ ಅದನ್ನು ಬಹಿಷ್ಕರಿಸಬೇಕಾಗಿತ್ತು. ಅವರು ಸರ್ಕಾರ ಹಾಕಿದ ಬಲೆಗೆ ಬೀಳುತ್ತಿದ್ದಾರೆ. ನೀವು ಸರ್ಕಾರ ಮಾಡಿದ ಪಾಪಗಳು ಮತ್ತು ಅಪರಾಧವನ್ನು ಸಮರ್ಥಿಸಿಕೊಳ್ಳಲಿದ್ದೀರಿ, ದೇಶವನ್ನಲ್ಲ" ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರನ್ನು ನಿಯೋಗದ ನೇತೃತ್ವ ವಹಿಸಲು ನಾಮನಿರ್ದೇಶನ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾವತ್, ಲೋಕಸಭೆಯಲ್ಲಿ ಸಂಖ್ಯಾ ಬಲದ ಕಾರಣ ತಮ್ಮ ಪಕ್ಷಕ್ಕೂ ಒಂದು ನಿಯೋಗದ ನೇತೃತ್ವ ವಹಿಸುವ ಅವಕಾಶ ಸಿಗಬೇಕಿತ್ತು ಎಂದರು.
"ಸೇನಾ-ಯುಬಿಟಿ, ಟಿಎಂಸಿ, ಆರ್‌ಜೆಡಿಯನ್ನು ಯಾರಾದರೂ ಕೇಳಿದ್ದೀರಾ? ಸರ್ವಪಕ್ಷ ನಿಯೋಗ ಹೋಗುತ್ತಿದೆ ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ" ಎಂದು ರಾವತ್ ಪ್ರಶ್ನಿಸಿದರು.
"ಈ ರೀತಿ ಆತುರದಿಂದ ನಿಯೋಗ ಕಳುಹಿಸುವ ಅಗತ್ಯವಿರಲಿಲ್ಲ. ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ಕುರಿತು ವಿಶೇಷ ಅಧಿವೇಶನ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಸರ್ಕಾರ ಅದರ ಬಗ್ಗೆ ಚರ್ಚೆ ನಡೆಸಲು ಸಿದ್ಧವಿಲ್ಲ" ಎಂದು ರಾವತ್ ವಾಗ್ದಾಳಿ ನಡೆಸಿದರು.
ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ವಿವರಿಸಲು ಕೇಂದ್ರ ಸರ್ಕಾರ ವಿದೇಶಗಳಿಗೆ ಏಳು ಸಂಸದರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಕಳುಹಿಸುತ್ತಿದೆ.
Advertisement