
ಮುಂಬೈ: 2019ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದಿದ್ದಕ್ಕಾಗಿಯೇ ಜಾರಿ ನಿರ್ದೇಶನಾಲಯವು (ED) ತಮ್ಮನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
'ನರ್ಕರ್ತಲಾ ಸ್ವರ್ಗ' (ನರಕದಲ್ಲಿ ಸ್ವರ್ಗ) ಎಂಬ ತಮ್ಮ ಪುಸ್ತಕದಲ್ಲಿ, ಆ ವರ್ಷ ಅಧಿಕಾರಕ್ಕೆ ಬಂದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ 'ರಕ್ಷಣಾತ್ಮಕ ಗೋಡೆ'ಯಾಗಿದ್ದರಿಂದ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ರಾವುತ್ ಹೇಳಿದ್ದಾರೆ.
ಠಾಕ್ರೆ ಸರ್ಕಾರ ಪತನವಾದ ಕೂಡಲೇ, 2022ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ರಾವುತ್ ಅವರನ್ನು ಬಂಧಿಸಿದ ನಂತರ ಜೈಲಿನಲ್ಲಿನ ಅವರ ಅನುಭವಗಳ ಕುರಿತಾದ ಮಾಹಿತಿ ಈ ಪುಸ್ತಕದಲ್ಲಿದೆ. ನಂತರ ರಾವುತ್‌ಗೆ ಜಾಮೀನು ಸಿಕ್ಕಿತು.
'ನನ್ನ ವಿರುದ್ಧ (ಇ.ಡಿ) ಕ್ರಮ ಕೈಗೊಳ್ಳಲು ಪ್ರಮುಖ ಕಾರಣವೆಂದರೆ, ನಾನು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದದ್ದು. ಠಾಕ್ರೆ ಸರ್ಕಾರವನ್ನು ರಕ್ಷಿಸಲು ನಾನು ರಕ್ಷಣಾತ್ಮಕ ಗೋಡೆಯಾಗಿಯೂ ನಿಂತಿದ್ದೆ. ಅದರ ನಂತರವೇ ಠಾಕ್ರೆ ಸರ್ಕಾರ ಕುಸಿಯಿತು. ಏಕನಾಥ್ ಶಿಂಧೆ ಸರ್ಕಾರವನ್ನು ಸಂವಿಧಾನಬಾಹಿರ ವಿಧಾನಗಳ ಮೂಲಕ ರಚಿಸಲಾಯಿತು. ಶಿಂಧೆ ಮತ್ತು ಆಗ ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಇಬ್ಬರೂ ಒಂದು ವಿಚಾರವನ್ನು ಒಪ್ಪಿಕೊಂಡಿದ್ದರು. ಅದೇನೆಂದರೆ, ಸರ್ಕಾರ ಕಾರ್ಯನಿರ್ವಹಿಸಬೇಕಾದರೆ, ರಾವುತ್ ಜೈಲಿನಲ್ಲಿರಬೇಕು ಎಂಬುದಾಗಿತ್ತು' ಎಂದು ಅವರು ಹೇಳಿದರು.
2019ರ ಚುನಾವಣೆಯಲ್ಲಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಗಳಿಸಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿದ್ದು ಬಿಜೆಪಿಗೆ ನೋವುಂಟು ಮಾಡಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಶಿವಸೇನೆ ಕೈಜೋಡಿಸಿದ್ದರಿಂದ, ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಯಿತು. 2019ರಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದಿರಲು ರಾವುತ್ ಅವರೇ ಕಾರಣ ಎಂದು ಬಿಜೆಪಿ ಪರಿಗಣಿಸಿತು. ಬಿಜೆಪಿಗೆ ಯಾವಾಗಲೂ ಈ ವಿಷಾದವಿತ್ತು' ಎಂದರು.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ, ಮುಖ್ಯಮಂತ್ರಿ ಹುದ್ದೆಗಾಗಿ ಶಿವಸೇನೆ ಬಿಜೆಪಿಯಿಂದ ಬೇರ್ಪಟ್ಟಿತು. ನಂತರ ಅದು ಕಾಂಗ್ರೆಸ್ ಮತ್ತು (ಅವಿಭಜಿತ) ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿಯ ಭಾಗವಾಯಿತು. ಎಂವಿಎ ಸರ್ಕಾರದ ನೇತೃತ್ವವನ್ನು ಉದ್ಧವ್ ಠಾಕ್ರೆ ವಹಿಸಿದ್ದರು.
ಉದ್ಧವ್ ಠಾಕ್ರೆ ಅವರನ್ನು 2019ರಲ್ಲಿ ಮುಖ್ಯಮಂತ್ರಿಯಾಗಿ ನೋಡಲು ಸಹಿಸದ ಬಿಜೆಪಿ ನಾಯಕರು, ಅವರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದರು. ಸರ್ಕಾರವು 170 ಶಾಸಕರ ಬಹುಮತವನ್ನು ಹೊಂದಿರುವುದರಿಂದ, ಅವರ 'ಆಪರೇಷನ್ ಕಮಲ' ಯಶಸ್ವಿಯಾಗುವುದು ಅಸಾಧ್ಯ ಎಂದು ತಿಳಿಯಿತು.
ಅದಕ್ಕಾಗಿಯೇ ಕೇಂದ್ರ ಸಂಸ್ಥೆಗಳು ಯುದ್ಧಭೂಮಿಗೆ ಪ್ರವೇಶಿಸಿದವು. ಅನಿಲ್ ದೇಶಮುಖ್, ನವಾಬ್ ಮಲಿಕ್ ಮತ್ತು ಸಂಜಯ್ ರಾವುತ್ ಅವರನ್ನು ಗುರಿಯಾಗಿಸಿಕೊಳ್ಳಲಾಯಿತು. ತನಿಖಾ ಸಂಸ್ಥೆಯು ರಾಜಕೀಯ ಕಾರ್ಯಸೂಚಿಯನ್ನು ನಿರ್ಧರಿಸಿತ್ತು ಮತ್ತು ಮಹಾರಾಷ್ಟ್ರದಲ್ಲಿ ಬಂಧಿಸಬೇಕಾದ ಎಂವಿಎ ನಾಯಕರ ಪಟ್ಟಿಯನ್ನು ಮಾಡಿತ್ತು. ಪಟ್ಟಿಯಲ್ಲಿ ದೇಶಮುಖ್, ಮಲಿಕ್ ಮತ್ತು ಸಂಜಯ್ ರಾವುತ್ ಸೇರಿದ್ದರು ಎಂದು ಪುಸ್ತಕ ಹೇಳಿಕೊಂಡಿದೆ.
ಎನ್‌ಸಿಪಿಯ ದೇಶ್‌ಮುಖ್ ಮತ್ತು ಮಲಿಕ್ ಇಬ್ಬರೂ ಠಾಕ್ರೆ ಸರ್ಕಾರದಲ್ಲಿ ಸಚಿವರಾಗಿದ್ದರು. ಠಾಕ್ರೆ ವಿರುದ್ಧ ದಂಗೆ ಎದ್ದ ಅವಿಭಜಿತ ಶಿವಸೇನೆಯ 40 ಶಾಸಕರಲ್ಲಿ (ಶಿಂಧೆ ಸೇರಿದಂತೆ) 11 ಜನರ ಸುತ್ತ ಇ.ಡಿ ತನ್ನ ಕುಣಿಕೆಯನ್ನು ಬಿಗಿಗೊಳಿಸಿತ್ತು. ಅವಿಭಜಿತ ಶಿವಸೇನೆಯ ಕೆಲವು ಸಂಸದರನ್ನು ಸಹ ಇ.ಡಿ ಬಂಧಿಸಲಿದೆ ಎಂದು ರಾವುತ್ ಹೇಳಿದ್ದಾರೆ.
Advertisement