
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಟೀಕೆ ಮತ್ತು ತನಿಖೆಯನ್ನು ಎದುರಿಸುತ್ತಿರುವ ಹಾಸ್ಯನಟ ಕುನಾಲ್ ಕಾಮ್ರಾ ಅವರಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡಬೇಕೆಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದಾರೆ. 2020ರಲ್ಲಿ ನಟಿ ಕಂಗನಾ ರಣಾವತ್ ಅವರಿಗೆ ಸರ್ಕಾರ ರಕ್ಷಣೆ ಒದಗಿಸಿದ್ದನ್ನು ನೆನಪಿಸಿದ್ದಾರೆ.
ಏಕನಾಥ್ ಶಿಂಧೆ ಅವರನ್ನು ಕಾರ್ಯಕ್ರಮವೊಂದರಲ್ಲಿ 'ದೇಶದ್ರೋಹಿ' ಎಂದು ಟೀಕಿಸಿದ್ದಕ್ಕಾಗಿ ಕಾಮ್ರಾ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಕಳೆದ ಭಾನುವಾರ ಶಿಂಧೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು.
ಶುಕ್ರವಾರ, ಮದ್ರಾಸ್ ಹೈಕೋರ್ಟ್ ಕಾಮ್ರಾ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕುನಾಲ್ ಕಾಮ್ರಾ ಅವರಿಗೆ ಎರಡು ನೋಟಿಸ್‌ಗಳನ್ನು ನೀಡಿದ್ದು, ಕಾಮ್ರಾ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯನ್ನು ಪ್ರತಿಪಾದಿಸುವ ಕವಿತೆಯ ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ರಾವುತ್ ಸ್ವಾಗತಿಸಿದರು. ಪ್ರತಾಪ್‌ಗಢಿಯವರಂತೆಯೇ, ಕಾಮ್ರಾ ಕೂಡ ಒಬ್ಬ ಕಲಾವಿದ, ಕವಿ ಮತ್ತು ವಿಡಂಬನಕಾರ ಎಂದರು.
'ಕಾಮ್ರಾ ಅವರು ಮುಂಬೈಗೆ ಬಂದು ತನ್ನ ವಿಷಯವನ್ನು (ಪೊಲೀಸರ ಮುಂದೆ) ಮಂಡಿಸಬೇಕು. ಕೇಂದ್ರ ಸರ್ಕಾರ ಕಂಗನಾ ರಣಾವತ್ ಅವರನ್ನು ರಕ್ಷಿಸಿತು. ಅದರಂತೆ ಕುನಾಲ್ ಕಾಮ್ರಾ ಅವರಿಗೂ ವಿಶೇಷ ರಕ್ಷಣೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಸುದ್ದಿಗಾರರಿಗೆ ತಿಳಿಸಿದರು.
2020 ರಲ್ಲಿ, ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಬಾಂದ್ರಾದಲ್ಲಿರುವ ರಣಾವತ್ ಅವರ ಬಂಗಲೆಯ ಒಂದು ಭಾಗವನ್ನು ಮುಂಬೈ ನಾಗರಿಕ ಸಂಸ್ಥೆಯು ಬದಲಾವಣೆಗಳನ್ನು ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೆಡವಿತು. ಇದು ನಟಿ ಮತ್ತು ಶಿವಸೇನಾ ನಾಯಕರ ನಡುವೆ ಆಕ್ರೋಶ ಮತ್ತು ಮಾತಿನ ಚಕಮಕಿಗೆ ಕಾರಣವಾಯಿತು. ನಂತರ ಕೇಂದ್ರವು ಸದ್ಯ ಹಿಮಾಚಲ ಪ್ರದೇಶದ ಬಿಜೆಪಿ ಸಂಸದರಾಗಿರುವ ರಣಾವತ್ ಅವರಿಗೆ ರಕ್ಷಣೆ ನೀಡಿತ್ತು.
Advertisement