
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ಮತ್ತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಒಂದು ದೂರು ಜಲಗಾಂವ್ ನಗರದ ಮೇಯರ್ ಸಲ್ಲಿಸಿದ್ದರೆ, ಇನ್ನೆರಡು ದೂರುಗಳು ನಾಸಿಕ್‌ನ ಹೋಟೆಲ್ ಉದ್ಯಮಿ ಮತ್ತು ಮತ್ತೋರ್ವ ಉದ್ಯಮಿ ಸಲ್ಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಖಾರ್ ಪೊಲೀಸರು ಕಾಮ್ರಾ ಅವರನ್ನು ವಿಚಾರಣೆಗೆ ಎರಡು ಬಾರಿ ಕರೆದಿದ್ದಾರೆ, ಆದರೆ ಅವರು ಇನ್ನೂ ತನಿಖೆಗೆ ಹಾಜರಾಗಿಲ್ಲ.
ಇದಕ್ಕೂ ಮೊದಲು, ಮದ್ರಾಸ್ ಹೈಕೋರ್ಟ್ ಶುಕ್ರವಾರ ಕುನಾಲ್ ಕಾಮ್ರಾ ಅವರ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಷರತ್ತುಗಳೊಂದಿಗೆ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ.
ಕುನಾಲ್ ಕಾಮ್ರಾ ಅವರು ಇತ್ತೀಚಿನ ತಮ್ಮ ಹೇಳಿಕೆಗಳ ನಂತರ ತಮಗೆ ಅನೇಕ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ, ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಗುರುವಾರ ಕುನಾಲ್ ಕಾಮ್ರಾ, ಮುಖ್ಯವಾಹಿನಿಯ ಮಾಧ್ಯಮಗಳನ್ನು ಟೀಕಿಸುತ್ತಾ, ಅವು ಆಡಳಿತ ಪಕ್ಷದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.
ಕಾಮ್ರಾ ಮಾಧ್ಯಮಗಳನ್ನು 'ರಣಹದ್ದುಗಳು' ಎಂದು ಕರೆದರು ಮತ್ತು ತಪ್ಪು ಮಾಹಿತಿಯನ್ನು ಹರಡುವಲ್ಲಿ ಮತ್ತು ತುರ್ತು ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Advertisement