
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪರೇಷನ್ ಸಿಂಧೂರ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿರುವ ಅವರು, ಆ ಸಮಯದಲ್ಲಿ ಭಾರತ ಕಳೆದುಕೊಂಡ ವಿಮಾನಗಳ ಸಂಖ್ಯೆಯ ಬಗ್ಗೆ ಮಾತ್ರ ಮೌನವಾಗಿರುವುದು 'ಶಾಪ' ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಮೊದಲು ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಮೂಲಕ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು.
'ವಿದೇಶಾಂಗ ಸಚಿವ ಜೈಶಂಕರ್ ಅವರ ಮೌನವೇ ಹೇಳುವಂತೆ, ಅದು ಶಾಪಗ್ರಸ್ತ. ಹಾಗಾಗಿ ನಾನು ಮತ್ತೊಮ್ಮೆ ಕೇಳುತ್ತೇನೆ: ಆಪರೇಷನ್ ಸಿಂಧೂರ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಪಾಕಿಸ್ತಾನಕ್ಕೆ ತಿಳಿದಿದ್ದರಿಂದ ನಾವು ಎಷ್ಟು ಭಾರತೀಯ ವಿಮಾನಗಳನ್ನು ಕಳೆದುಕೊಂಡಿದ್ದೇವೆ?' ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
'ಇದೊಂದು ಲೋಪವಲ್ಲ. ಬದಲಿಗೆ ಇದು ಅಪರಾಧ ಮತ್ತು ರಾಷ್ಟ್ರವು ಸತ್ಯವನ್ನು ತಿಳಿದುಕೊಳ್ಳಬೇಕಿದೆ' ಎಂದು ರಾಹುಲ್ ಗಾಂಧಿ ಹೇಳಿದರು.
ಮೇ 17ರಂದು ರಾಹುಲ್ ಗಾಂಧಿ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವ ಮೊದಲು ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು ಎಂದು ಸಚಿವರು ಹೇಳಿರುವುದನ್ನು ನೋಡಬಹುದು. ಆ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ, 'ನಮ್ಮ ದೇಶ ದಾಳಿ ನಡೆಸುವುದಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಮಾಹಿತಿ ನೀಡುವುದು ಅಪರಾಧ. ಭಾರತ ಸರ್ಕಾರ ಇದನ್ನು ಮಾಡಿದೆ ಎಂದು ವಿದೇಶಾಂಗ ಸಚಿವಾಲಯವೇ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಇದಕ್ಕೆ ಅಧಿಕಾರ ನೀಡಿದ್ದು ಯಾರು? ಇದರ ಪರಿಣಾಮವಾಗಿ ನಮ್ಮ ವಾಯುಪಡೆ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಪ್ರಶ್ನಿಸಿದ್ದರು.
ಮೇ 7 ರಂದು ಆಪರೇಷನ್ ಸಿಂಧೂರ ಆರಂಭಿಸುವ ಮೊದಲು ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು ಎಂದು ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ವಿದೇಶಾಂಗ ಸಚಿವಾಲಯ ತಳ್ಳಿಹಾಕಿದ್ದು, ಇದು ಸಂಪೂರ್ಣ ತಪ್ಪು ನಿರೂಪಣೆ ಎಂದು ಹೇಳಿತ್ತು.
'ಆಪರೇಷನ್ ಸಿಂಧೂರದ ಆರಂಭಿಕ ಹಂತದಲ್ಲಿ ನಾವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದೆವು. ಆದರೆ, ಕಾರ್ಯಾಚರಣೆ ಪ್ರಾರಂಭವಾಗುವ ಮೊದಲು ಹೇಳಿಲ್ಲ ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದನ್ನು ಆರಂಭಕ್ಕೂ ಮುಂಚೆಯೇ ಮಾಹಿತಿ ನೀಡಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ಸತ್ಯದ ಸಂಪೂರ್ಣ ತಪ್ಪು ನಿರೂಪಣೆಯಾಗಿದ್ದು, ಇದನ್ನು ಬಯಲು ಮಾಡಲಾಗುತ್ತಿದೆ' ಎಂದು ಸಚಿವಾಲಯದ ಬಾಹ್ಯ ಪ್ರಚಾರ (XP) ವಿಭಾಗ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಅಡಿಯಲ್ಲಿ ಭಾರತವು ಮೇ 7ರ ಆರಂಭದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಮಾಡಿತು.
ನಂತರ ಪಾಕಿಸ್ತಾನ ನಡೆಸಿದ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಯಿತು. ನಾಲ್ಕು ದಿನಗಳ ಮುಖಾಮುಖಿಯ ನಂತರ ಮೇ 10 ರಂದು ಯುದ್ಧವನ್ನು ನಿಲ್ಲಿಸುವ ಬಗ್ಗೆ ಉಭಯ ದೇಶಗಳು ಕದನ ವಿರಾಮ ಒಪ್ಪಂದ ಮಾಡಿಕೊಂಡರು.
Advertisement