
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಸುದ್ದಿಮಾಧ್ಯಮಗಳಿಗೆ ಬ್ರೀಫಿಂಗ್ ಮಾಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶ ಬಿಜೆಪಿ ನಾಯಕ ವಿಜಯ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಮತ್ತೆ ಚಾಟಿ ಬೀಸಿದ್ದು, ಅವರು ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.
ಹೌದು.. ಕರ್ನಲ್ ಸೋಫಿಯಾ ಖುರೇಷಿಯನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದ ವಿಜಯ್ ಶಾ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಕ್ಷಮೆ ಕೋರುವಂತೆ ಸೂಚಿಸಿತ್ತು. ಅದರಂತೆ ವಿಜಯ್ ಶಾ ಕೂಡ ಕ್ಷಮೆಯಾಚಿಸಿದ್ದರು. ಆದರೆ ಇದೀಗ ಈ ಕ್ಷಮೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಕಾನೂನು ಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಹೆಚ್ಚಾಗಿ "ಮೊಸಳೆ ಕಣ್ಣೀರು" ಸುರಿಸುತ್ತಿದ್ದಾರೆ ಎಂದು ಟೀಕಿಸಿದೆ.
ಅಲ್ಲದೆ ಅವರ "ಅಸಭ್ಯ ಹೇಳಿಕೆಗಳಿಗೆ" ಅವರನ್ನು ಖಂಡಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, 'ಇದು ಪ್ರಾಮಾಣಿಕ ಕ್ಷಮೆಯಾಚನೆಯಲ್ಲ. ಇದು ನ್ಯಾಯಾಲಯದ ಆದೇಶವನ್ನು ಅನುಸರಿಸುತ್ತಿದೆ ಎಂಬ ಭಾವನೆಯನ್ನು ನೀಡಿತು ಎಂದು ಹೇಳಿದ್ದಾರೆ.
'ಏನ್ರೀ ಅದು ಕ್ಷಮೆ.. ಸ್ವಲ್ಪನಾದ್ರೂ ಅರ್ಥ ಇದ್ಯಾ..'
ಇದೇ ವೇಳೆ ವಿಜಯ್ ಶಾ ವಿರುದ್ಧ ಕಿಡಿಕಾರಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, 'ಏನ್ರೀ ಅದು ಕ್ಷಮೆ.. ಸ್ವಲ್ಪನಾದ್ರೂ ಅರ್ಥ ಇದ್ಯಾ.. ನೀವು ಯಾವ ರೀತಿಯ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆಯಾ?. ಕೆಲವೊಮ್ಮೆ ಜನರು ವಿಚಾರಣೆಯಿಂದ ಹೊರಬರಲು ಮಾತ್ರ ಸೌಮ್ಯ ಭಾಷೆಯನ್ನು ಬಳಸುತ್ತಾರೆ ಮತ್ತು ಕೆಲವೊಮ್ಮೆ ಅವರು ಮೊಸಳೆ ಕಣ್ಣೀರು ಸುರಿಸುತ್ತಾರೆ.
ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯವು ನಿಮ್ಮನ್ನು ಕ್ಷಮೆಯಾಚಿಸಲು ಕೇಳಿದೆ ಎಂಬ ಭಾವನೆಯನ್ನು ನೀವು ನೀಡಲು ಬಯಸುತ್ತೀರಿ. ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕ ಕ್ಷಮೆಯಾಚಿಸಲು ನಿಮಗೆ ಏನು ಅಡ್ಡಿಯಾಯಿತು?" ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಕೇಳಿತು ಮತ್ತು ಪ್ರಕರಣದ ಸ್ಥಿತಿಯ ಬಗ್ಗೆ ಪೊಲೀಸರನ್ನು ಕೇಳಿತು.
'ಮೊಸಳೆ ಕಣ್ಣೀರಿಗೆ ನಾವು ಜಗ್ಗಲ್ಲ'
"ನಾನು ತಪ್ಪು 'ಮಾಡಿದ್ದರೆ' ಕ್ಷಮೆ ಯಾಚಿಸುತ್ತೇನೆ ಎಂದು ನೀವು ಹೇಳುತ್ತಿದ್ದೀರಿ... ಸಂಪೂರ್ಣವಾಗಿ ಯೋಚಿಸದೆ ನೀವು ಮಾಡಿರುವ ಈ ರೀತಿಯ ಅಸಭ್ಯ ಹೇಳಿಕೆಗಳು ಸಮರ್ಥನೀಯವಲ್ಲ... ನಿಮ್ಮ ಮೊಸಳೆ ಕಣ್ಣೀರಿಗೆ ನಾವು ಜಗ್ಗಲ್ಲ.. ನಮಗೆ ಈ ಕ್ಷಮೆಯಾಚನೆಯ ಅಗತ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ಅವರನ್ನು ಖಂಡಿಸಿತು.
SIT ತನಿಖೆಗೆ ಆದೇಶ
ಇದೇ ವೇಳೆ ಸರ್ವೋಚ್ಛ ನ್ಯಾಯಾಲಯ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಕೇಡರ್‌ನ ಮೂವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಶುಕ್ರವಾರ ಆದೇಶಿಸಿದೆ. ಕೋರ್ಟ್ ಕ್ರಮಗಳಿಂದ ತಪ್ಪಿಸಿಕೊಳ್ಳಲು ವಿಜಯ್ ಶಾ ಮಾಡಿದ ಪ್ರಯತ್ನಗಳನ್ನು ಗಮನಿಸಿದ ಕೋರ್ಟ್, ನಾಳೆಯೊಳಗೆ ಎಸ್‌ಐಟಿ ರಚಿಸುವಂತೆ ಪೊಲೀಸ್ ಮಹಾನಿರ್ದೇಶಕರನ್ನು ಕೇಳಿದೆ.
"ನಾವು ಮೂವರು ಐಪಿಎಸ್ ಅಧಿಕಾರಿಗಳನ್ನು ಹೊಂದಿರುವ ಎಸ್‌ಐಟಿಯನ್ನು ರಚಿಸುತ್ತಿದ್ದೇವೆ ಮತ್ತು ಒಬ್ಬರು ಐಜಿ ಅಥವಾ ಡಿಜಿಪಿ ಶ್ರೇಣಿಯ ಅಧಿಕಾರಿಯಾಗಿರಬೇಕು. ಅವರೆಲ್ಲರೂ ರಾಜ್ಯದ ಹೊರಗಿನವರಾಗಿರಬೇಕು. ಇದು ಒಂದು ಅಗ್ನಿ ಪರೀಕ್ಷೆಯಾಗಿದ್ದು, ರಾಜ್ಯವು ಎಸ್‌ಐಟಿ ವರದಿಯನ್ನು ನಮಗೆ ಸಲ್ಲಿಸಬೇಕೆಂದು ನಾವು ಬಯಸುತ್ತೇವೆ. ನಾವು ಬಹಳ ನಿಕಟವಾಗಿ ಗಮನಿಸಲು ಬಯಸುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?
ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಸುದ್ದಿಮಾಧ್ಯಮಗಳಿಗೆ ಬ್ರೀಫಿಂಗ್ ಮಾಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಪಹಲ್ಗಾಮ್ ಭಯೋತ್ಪಾದಕರನ್ನು ಅವರ ಸಹೋದರಿಯಿಂದಲೇ ಹೊಡೆಸಿದ್ದಾಗಿ ಹೇಳಿದ್ದರು. ಆ ಮೂಲಕ ಆಪ್ ಸಿಂಧೂರ್ ಬ್ರೀಫಿಂಗ್‌ಗಳ ಸಮಯದಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಲ್ಲಿ ಒಬ್ಬರಾದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿರಿಸಿಕೊಂಡು ಹೇಳಿದ್ದಾರೆ ಎನ್ನಲಾಗಿತ್ತು.
ವಿಜಯ್ ಶಾ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ ಮಧ್ಯಪ್ರದೇಶ ಹೈಕೋರ್ಟ್, "ಗಣಿ ಭಾಷೆ" ಬಳಸಿದ್ದಕ್ಕಾಗಿ ವಿಜಯ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತು. ನಂತರ ಸುಪ್ರೀಂ ಕೋರ್ಟ್ ಕರ್ನಲ್ ಖುರೇಷಿಗೆ ಕ್ಷಮೆಯಾಚಿಸುವಂತೆ ವಿಜಯ್ ಶಾ ಅವರನ್ನು ಕೇಳಿತ್ತು.
Advertisement