
ಪಾಟ್ನಾ: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಮಾಜಿ ಸಂಸದ ಉದಯ್ ಸಿಂಗ್ ಅವರನ್ನು ತಮ್ಮ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸೋಮವಾರ ಘೋಷಿಸಿದರು.
ಇಂದು ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಶೋರ್, ಉದಯ್ ಸಿಂಗ್ ಮತ್ತು ಆರ್‌ಸಿಪಿ ಸಿಂಗ್ ಅವರು ಭಾನುವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ಸಂಘಟನೆಯನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿದ್ದೇನೆ. ನಾನು ಇನ್ನುಮುಂದೆ ಸಾರ್ವಜನಿಕ ಸಂಪರ್ಕದತ್ತ ಗಮನಹರಿಸುತ್ತೇನೆ ಎಂದು ಹೇಳಿದರು.
"ನಾನು ಈಗ ನಾಳೆಯಿಂದ ಬಿಹಾರದಲ್ಲಿ ನನ್ನ ಪಾದಯಾತ್ರೆಯನ್ನು ಪುನರಾರಂಭಿಸಬಹುದು" ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.
ಕಳೆದ ವರ್ಷ ಅಕ್ಟೋಬರ್ 2 ರಂದು ಸ್ಥಾಪನೆಯಾದ ಜನ ಸುರಾಜ್ ಪಕ್ಷವು ಅಂದಿನಿಂದ ಪೂರ್ಣ ಪ್ರಮಾಣದ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು.
ಕಿಶೋರ್ ಅವರು ತಾವು ಯಾವುದೇ ಹುದ್ದೆಯನ್ನು ಹೊಂದುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಪಕ್ಷ ಸ್ಥಾಪನೆಯಾದ ಕೂಡಲೇ ಮಾಜಿ ಐಪಿಎಸ್ ಅಧಿಕಾರಿ ಮನೋಜ್ ಭಾರ್ತಿ ಅವರನ್ನು "ಕಾರ್ಯಾಧ್ಯಕ್ಷರಾಗಿ" ನೇಮಕ ಮಾಡಲಾಗಿತ್ತು.
Advertisement