
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪೊಲೀಸ್ ಆಡಳಿತವು ಜಾಗರೂಕ ಸ್ಥಿತಿಯಲ್ಲಿದ್ದು, ಪಾಕಿಸ್ತಾನಿ ಗೂಢಚಾರರ ಮೇಲೆ ನಿರಂತರವಾಗಿ ನಿಗಾವಹಿಸಿವೆ. ಏತನ್ಮಧ್ಯೆ, ಪಂಜಾಬ್ ಪೊಲೀಸರು ಇಬ್ಬರು ಪಾಕಿಸ್ತಾನಿ ಗೂಢಚಾರರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
"ಸೂಕ್ಷ್ಮ ಮಿಲಿಟರಿ ಮಾಹಿತಿಯನ್ನು ಸೋರಿಕೆ ಮಾಡುವಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಮೂಲಕ ಗುರುದಾಸ್ಪುರ ಪೊಲೀಸರು ರಾಷ್ಟ್ರೀಯ ಭದ್ರತೆಯನ್ನು ರಾಜಿ ಮಾಡಿಕೊಳ್ಳುವ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ" ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡಿದ್ದಾರೆ.
ಮೇ 15ರಂದು ಸುಖ್‌ಪ್ರೀತ್ ಸಿಂಗ್ ಮತ್ತು ಕರಣ್‌ಬೀರ್ ಸಿಂಗ್ ಎಂಬುವರು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಸೈನಿಕರ ಚಲನವಲನಗಳು ಮತ್ತು ಪ್ರಮುಖ ಕಾರ್ಯತಂತ್ರದ ಸ್ಥಳಗಳು ಸೇರಿದಂತೆ ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಹಂಚಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ವಿಶ್ವಾಸಾರ್ಹ ಗುಪ್ತಚರ ಮಾಹಿತಿಗಳು ಸಿಕ್ಕಿದ್ದವು ಎಂದರು.
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರೂ ಶಂಕಿತರನ್ನು ಬಂಧಿಸಿದರು ಎಂದು ಯಾದವ್ ಹೇಳಿದರು. ಪೊಲೀಸ್ ತಂಡವು ಆರೋಪಿಗಳ ಬಳಿಯಿಂದ ಮೂರು ಮೊಬೈಲ್ ಫೋನ್‌ಗಳು ಮತ್ತು ಎಂಟು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ.
ಡಿಜಿಪಿ ಪ್ರಕಾರ, ಆರೋಪಿಗಳು ಐಎಸ್ಐ ನಿರ್ವಾಹಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ದೋರಂಗಲ ಪೊಲೀಸ್ ಠಾಣೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದಕ್ಕೂ ಮೊದಲು, ಹರಿಯಾಣದ ನುಹ್ ಜಿಲ್ಲೆಯಿಂದ ತಾರಿಫ್ ಎಂಬ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಲಾಗಿತ್ತು. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿತರಾಗಿರುವ ಇಬ್ಬರು ಉದ್ಯೋಗಿಗಳಿಗೆ ತಾರಿಫ್ ವಾಟ್ಸಾಪ್ ಮೂಲಕ ಭಾರತೀಯ ಮಿಲಿಟರಿ ಚಟುವಟಿಕೆಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕಳುಹಿಸುತ್ತಿದ್ದನು ಎಂದು ಆರೋಪಿಸಲಾಗಿದೆ. ಮಾಹಿತಿಯ ಪ್ರಕಾರ, ನುಹ್ ಪೊಲೀಸರು ಭಾರತೀಯ ದಂಡ ಸಂಹಿತೆ, ಅಧಿಕೃತ ರಹಸ್ಯ ಕಾಯ್ದೆ, 1923 ಮತ್ತು ದೇಶದ್ರೋಹ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement