
ಪಾಟ್ನಾ: ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಆ ಬಿಜೆಪಿ ನಾಯಕ ನಮ್ಮ ಪಕ್ಷದಲ್ಲಿದ್ದಿದ್ದರೆ "ಅವರನ್ನು ಜೀವನಪರ್ಯಂತ ಉಚ್ಚಾಟಿಸಲಾಗುತ್ತಿತ್ತು" ಎಂದು ಸೋಮವಾರ ಹೇಳಿದ್ದಾರೆ.
ತಮ್ಮ ತವರು ರಾಜ್ಯ ಬಿಹಾರ ಪ್ರವಾಸದಲ್ಲಿರುವ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಅಧ್ಯಕ್ಷ ಚೀರಾಗ್ ಅವರು, ವಿಜಯ್ ಶಾ ಹೇಳಿಕೆ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
"ನಮ್ಮ ಸೇನಾ ಸಿಬ್ಬಂದಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಅವರನ್ನು ಯಾರಾದರೂ ಭಯೋತ್ಪಾದಕರೊಂದಿಗೆ ಹೋಲಿಸಿದರೆ ಖಂಡಿಸುತ್ತೇವೆ. ಅಂತಹ ವ್ಯಕ್ತಿ ನನ್ನ ಪಕ್ಷದಲ್ಲಿದ್ದರೆ, ಅವರನ್ನು ಜೀವನಪರ್ಯಂತ ಪಕ್ಷದಿಂದ ಉಚ್ಚಾಟಿಸಲಾಗುತ್ತಿತ್ತು" ಎಂದು ಹಾಜಿಪುರ ಸಂಸದ ಹೇಳಿದ್ದಾರೆ.
ಗಮನಾರ್ಹ ವಿಚಾರ ಎಂದರೆ, ಚಿರಾಗ್ ಅವರ ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್) ಬಿಜೆಪಿಯ ಮಿತ್ರಪಕ್ಷವಾಗಿದೆ.
ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು "ಭಯೋತ್ಪಾದಕರ ಸಹೋದರಿ" ಎಂದು ವಿಜಯ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದು "ನಾಲಿಗೆಯ ಎಡವಟ್ಟು" ಎಂದು ಹೇಳುತ್ತಿರುವ ವಿಜಯ್ ಶಾ ವಿರುದ್ಧ ಬಿಜೆಪಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಧ್ಯಪ್ರದೇಶದ ಸಚಿವರು ಎನ್‌ಡಿಎ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Advertisement