
ಚೆನ್ನೈ: DMK ಯುವ ಘಟಕದ ಸದಸ್ಯನ ವಿರುದ್ಧ ಆತನ 20 ವರ್ಷದ ಪತ್ನಿ ಮಾಡಿರುವ ಚಿತ್ರಹಿಂಸೆ, ಲೈಂಗಿಕ ಕಿರುಕುಳದ ಆರೋಪ ತಮಿಳುನಾಡು ರಾಜಕೀಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಹೌದು. ಅರಕ್ಕೋಣಂನ ದೆವಸೇಯಲ್ ಎಂಬುವರು ರಾಜಕಾರಣಿಗಳೊಂದಿಗೆ ಮಲಗುವಂತೆ ನನ್ನನ್ನು ಬಲವಂತಪಡಿಸುತ್ತಿರುವುದಾಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಪತ್ನಿಯ ಆರೋಪ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಆರೋಪಗಳನ್ನು ಮೊದಲು ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಬಯಲಿಗೆ ತಂದಿತ್ತು. ತದನಂತರ ವ್ಯಾಪಕವಾಗಿ ಹರಡುತ್ತಿದೆ.
ರಾಜಕಾರಣಿಗಳೊಂದಿಗೆ ಮಲಗುವಂತೆ ಒತ್ತಾಯ:
'ರಾಜಕಾರಣಿಗಳೊಂದಿಗೆ ಮಲಗುವಂತೆ ಒತ್ತಾಯಿಸುವುದು, ನನ್ನನ್ನು ಹುಚ್ಚು ನಾಯಿಯಂತೆ ಕಚ್ಚುವುದು ಆತನ ಕೆಲಸವಾಗಿದೆ. ಕಾಲೇಜಿಗೆ ಹೋಗುವ ದಾರಿಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು, ಫೋನ್ ನ್ನು ಹೊಡೆದು ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರೆ ಯಾವುದೇ ಪ್ರಯೋಜನವಾಗಲ್ಲ. ಪೊಲೀಸರ ಬೆಂಬಲ ನನಗಿದೆ ಎಂದು ಹೇಳುವ ಮೂಲಕ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದು ವಿಷ ಸೇವಿಸಲು ಪ್ರಯತ್ನಿಸಿರುವುದಾಗಿ ಆಕೆ ಹೇಳಿರುವುದಾಗಿ NDTV ವರದಿ ಮಾಡಿದೆ.
ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೊಲೀಸರಿಗೆ ದೂರು ನೀಡಿದಾಗ, ನನ್ನನ್ನು ತುಂಡು ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕಾರಿನೊಳಗೆ ನನಗೆ ಕಿರುಕುಳ ನೀಡಿದ್ದು, ಆತ ತೋರಿಸಿದ ಪುರುಷರೊಂದಿಗೆ ಮಲಗಲು ಬಲವಂತಪಡಿಸಲಾಯಿತು. ನನ್ನ ಮನೆಯಿಂದ ಹೊರಬರಲು ಸಹ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಎಲ್ಲರ ಮುಂದೆ ನನ್ನನ್ನು ನಿಂದಿಸುವ ಪತಿ ವಿರುದ್ಧ ಡಿಎಂಕೆ ಮುಖ್ಯಸ್ಥರಾಗಿರುವ ಎಂಕೆ ಸ್ಟಾಲಿನ್ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಸಾಯುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನೊಳಗೆ ಎಳೆದುಕೊಂಡು ಮಾನಸಿಕವಾಗಿ ಕಿರುಕುಳ: ಡಿಎಂಕೆಯ ಯುವ ಘಟಕದ ಉಪ ಕಾರ್ಯದರ್ಶಿ ಎಂದು ತೋರಿಸಿಕೊಳ್ಳುವ ದೆವಸೇಯಲ್, ಪೊಲೀಸರಿಗೆ ದೂರು ನೀಡಿದರೆ ನನ್ನ ಕುಟುಂಬಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಜನವರಿ 31 ರಂದು ಪರೀಕ್ಷೆ ಬರೆಯಲು ಹೋದಾಗ ತನ್ನ ಸಹಚರರೊಂದಿಗೆ ಸೇರಿಕೊಂಡು ಕಾರಿನೊಳಗೆ ಎಳೆದುಕೊಂಡು ಮಾನಸಿಕವಾಗಿ ಕಿರುಕುಳ ನೀಡಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೇ 7 ರಂದು ದಾಖಲಿಸಿರುವ ದೂರಿನಲ್ಲಿ, ದೆವಸೇಯಲ್ ತನ್ನ ಮೊದಲ ಮದುವೆಯನ್ನು ತಿಳಿಸಿಲ್ಲ. ಬೆದರಿಕೆ ಹಾಕಿ ಮದುವೆಯಾಗಿದ್ದು, ಪಕ್ಷದ ಇತರ ಪದಾಧಿಕಾರಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿರುತ್ತಾನೆ ಎಂದು ಆರೋಪಿಸಿದ್ದಾರೆ.
ಆರೋಪಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ: AIADMK
ಡಿಎಂಕೆ ದೆವಸೇಯಲ್ ರಕ್ಷಿಸುತ್ತಿದೆ ಎಂದು ಆರೋಪಿಸಿರುವ AIADMK, ರಾಜಕೀಯ ಒತ್ತಡದಿಂದ ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದೆ. ಎಎಡಿಎಂಕೆ ಶಾಸಕ ರವಿ, ಮತ್ತಿತರರು ಆಕೆಯ ಪರವಾಗಿ ಧ್ವನಿ ಎತ್ತುವವರೆಗೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಹೇಳಿದ್ದಾರೆ. ಆರೋಪಿ ದೇವಸೇಯಲ್ ವಿರುದ್ಧ ಕ್ರಮ ಕೈಗೊಳ್ಳಲಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement