ಛತ್ತೀಸ್ಗಢದಲ್ಲಿ ಭರ್ಜರಿ ಕಾರ್ಯಾಚರಣೆ: ನಕ್ಸಲ್‌ ಕಮಾಂಡರ್‌ ಸೇರಿ 27 ಮಾವೋವಾದಿಗಳ ಹತ್ಯೆ; ಚಾರಿತ್ರಿಕ ಸಾಧನೆ ಎಂದು ಭದ್ರತಾ ಪಡೆಗಳ ಕೊಂಡಾಡಿದ ಸರ್ಕಾರ

ಇದರಲ್ಲಿ ನಕ್ಸಲ್ ಚಟುವಟಿಕೆಯ ಬೆನ್ನೆಲುಬು ಆಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಹತ್ಯೆಗೀಡಾಗಿದ್ದಾರೆ.
ಛತ್ತೀಸ್ಗಢದಲ್ಲಿ ಭರ್ಜರಿ ಕಾರ್ಯಾಚರಣೆ: ನಕ್ಸಲ್‌ ಕಮಾಂಡರ್‌ ಸೇರಿ 27 ಮಾವೋವಾದಿಗಳ ಹತ್ಯೆ; ಚಾರಿತ್ರಿಕ ಸಾಧನೆ ಎಂದು ಭದ್ರತಾ ಪಡೆಗಳ ಕೊಂಡಾಡಿದ ಸರ್ಕಾರ
Updated on

ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಹ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕ್ಸಲ್‌ ಕಮಾಂಡರ್‌ ಸೇರಿ 27 ಮಾವೋವಾದಿಗಳ ಹತ್ಯೆ ಮಾಡಿದೆ. ಭದ್ರತಾ ಪಡೆಗಳ ಈ ಕಾರ್ಯಾಚರಣೆಯನ್ನು ಚಾರಿತ್ರಿಕ ಸಾಧನೆ ಎಂದು ಕೇಂದ್ರ ಸರ್ಕಾರ ಕೊಂಡಾಡಿದೆ.

ಭದ್ರತಾ ಪಡೆಗಳ ಕಾರ್ಯಾಚರಣೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಛತ್ತೀಸಗಢದ ನಾರಾಯಣಪುರದಲ್ಲಿ ಭದ್ರತಾ ಪಡೆಗಳು ನಡೆಸಿರುವ ಎನ್‌ಕೌಂಟರ್‌ನಲ್ಲಿ 27 ನಕ್ಸಲರನ್ನು ಹತ್ಯೆಗೈಯಲಾಗಿದೆ. ಇದರಲ್ಲಿ ನಕ್ಸಲ್ ಚಟುವಟಿಕೆಯ ಬೆನ್ನೆಲುಬು ಆಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಹತ್ಯೆಗೀಡಾಗಿದ್ದಾರೆ.

ನಕ್ಸಲರ ವಿರುದ್ಧ ದೇಶ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕನ ನಿಗ್ರಹ ಮಾಡಲಾಗಿದೆ. ಈ ಕಾರ್ಯಾಚರಣೆಗಾಗಿ ನಮ್ಮ ಧೈರ್ಯಶಾಲಿ ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆಂದು ಹೇಳಿದ್ದಾರೆ.

'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಕಾರ್ಯಾಚರಣೆಯ ಬಳಿಕ ಛತ್ತೀಸಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 54 ನಕ್ಸಲರನ್ನು ಬಂಧಿಸಲಾಗಿದ್ದು, 84 ನಕ್ಸಲರು ಶರಣಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ '2026ರ ಮಾರ್ಚ್ 31ರೊಳಗಾಗಿ ನಕ್ಸಲ್ ನಿರ್ಮೂಲನೆ ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ' ಎಂದೂ ಪುನರುಚ್ಚರಿಸಿದ್ದಾರೆ.

ಛತ್ತೀಸ್ಗಢದಲ್ಲಿ ಭರ್ಜರಿ ಕಾರ್ಯಾಚರಣೆ: ನಕ್ಸಲ್‌ ಕಮಾಂಡರ್‌ ಸೇರಿ 27 ಮಾವೋವಾದಿಗಳ ಹತ್ಯೆ; ಚಾರಿತ್ರಿಕ ಸಾಧನೆ ಎಂದು ಭದ್ರತಾ ಪಡೆಗಳ ಕೊಂಡಾಡಿದ ಸರ್ಕಾರ
Chhattisgarh: ನಾರಾಯಣ್ ಪುರ್-ಬಿಜಾಪುರ್ ಗಡಿಯಲ್ಲಿ ಗುಂಡಿನ ಚಕಮಕಿ; 27 ನಕ್ಸಲೀಯರು ಹತ್ಯೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ.

ಈ ಯಶಸ್ಸಿಗೆ ನಮ್ಮ ಸೇನಾಪಡೆಗಳ ಮೇಲೆ ನಮಗೆ ಬಗ್ಗೆ ಹೆಮ್ಮೆಯಿದೆ. ನಮ್ಮ ಸರ್ಕಾರ ಮಾವೋವಾದದ ಪಿಡುಗನ್ನು ತೊಡೆದುಹಾಕಲು ಮತ್ತು ನಮ್ಮ ಜನರಿಗೆ ಶಾಂತಿ ಮತ್ತು ಪ್ರಗತಿಯ ಜೀವನವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ.

ಬಸವರಾಜು ಅವರ ಹತ್ಯೆಯನ್ನು ನಕ್ಸಲ್‌ವಾದದ ವಿರುದ್ಧದ ಭಾರತದ ದಶಕಗಳ ಹೋರಾಟದಲ್ಲಿ ಒಂದು ಹೆಗ್ಗುರುತು ಎಂದು ಅಮಿತ್ ಶಾ ಅವರು ಶ್ಲಾಘಿಸಿದ್ದಾರೆ. ಅಲ್ಲದೆ, ಬಸವರಾಜು "ನಕ್ಸಲ್ ಚಳುವಳಿಯ ಬೆನ್ನೆಲುಬು" ಎಂದೂ ಕರೆದಿದ್ದಾರೆ. ಆದಾಗ್ಯೂ, ಆತನನ್ನು ಕಾನೂನುಬದ್ಧವಾಗಿ ಬಂಧಿಸುವ ಬದಲು ಹತ್ಯೆ ಮಾಡಿರುವುದು ಪ್ರಜಾಪ್ರಭುತ್ವದ ನಿಯಮಗಳು ಮತ್ತು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪಾಲಿಸುವ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ಹಿರಿಯ ಮಾವೋವಾದಿ ನಾಯಕನ ಕ್ರೂರ ಹತ್ಯೆ ಮಾಡಿರುವುದನ್ನು ಸಿಪಿಐ ಬಲವಾಗಿ ಖಂಡಿಸುತ್ತದೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ಸೋಗಿನಲ್ಲಿ ಕಾನೂನುಬಾಹಿರ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.

ಬಸವರಾಜು ಇದ್ದ ಸ್ಥಳದ ಬಗ್ಗೆ ಅಧಿಕಾರಿಗಳಿಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಇದ್ದರೆ, ಕಾನೂನುಬದ್ಧ ಬಂಧನವನ್ನೇಕೆ ಅನುಸರಿಸಲಿಲ್ಲ? ಸಂವಿಧಾನದಿಂದ ಖಾತರಿಪಡಿಸಲಾದ ಪ್ರಕ್ರಿಯೆಯನ್ನೇಕೆ ನಿರ್ಲಕ್ಷಿಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಎನ್ಕೌಂಟರ್ ಹಾಗೂ ನಕ್ಸಲ್ ವಿರೋಧಿ ಕಾರ್ಯಾಚರಣೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಶಕ್ತಿಗಳು ಈ ಘಟನೆಯ ವಿರುದ್ಧ ಮಾತನಾಡಬೇಕೆಂದೂ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com