
ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಸಿಂಗ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಎರಡನೇ ದಿನವೂ ಮುಂದುವರೆದಿದೆ.
ಕಿಶ್ತ್ವಾರ್ ಜಿಲ್ಲೆಯ ಚತ್ರೂವಿನ ಸಿಂಗ್‌ಪೋರಾ ಪ್ರದೇಶದಲ್ಲಿ 3-4 ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಅಡಗಿದ್ದ ಸ್ಥಳ ಸಮೀಪಿಸುತ್ತಿದ್ದಂತೆಯೇ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರು.
ಇದರಂತೆ ಉಗ್ರರ ವಿರುದ್ಧಧ ಸೇನಾ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟ್ಟಿದ್ದು, ನಿನ್ನೆಯಿಂದಲೂ ಕಾರ್ಯಾಚರಣೆ ಮುಂದುವರೆದಿದೆ.
ಛತ್ರು ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಿದ ನಂತರ ಇಂದು ಮುಂಜಾನೆ ಎನ್‌ಕೌಂಟರ್ ಪ್ರಾರಂಭವಾಗಿದೆ. ಪ್ರಸ್ತುತ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರೆಸಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.
ಉಗ್ರರ ವಿರುದ್ದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಮ್ಮ ವೀರ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಸ್ಥಳದಲ್ಲಿ ಉಗ್ರರನ್ನು ನಿಗ್ರಹಿಸುವ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಹೆಚ್ಚುವರಿ ಸೇನಾಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭದ್ರತಾ ಪಡೆಗಳು ಸ್ಥಳನ್ನು ಸುತ್ತುವರೆದಿದ್ದು, ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.
Advertisement