
ಜೈಪುರ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೇಳುತ್ತಿದ್ದಂತೆಯೇ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಜನರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದ ಸುದ್ದಿಗಳನ್ನು ನಾವು ಈ ಹಿಂದೆ ನೋಡಿದ್ದೆವು.
ಈ ಪಟ್ಟಿಗೆ ಇದೀಗ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿ 'ಪಾಕ್' ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'Pak' ನಿಷೇಧ: ಇನ್ಮುಂದೆ Pak ಅಲ್ಲ Shree
ಭಾರತ - ಪಾಕಿಸ್ತಾನ ಸಂಘರ್ಷದ ಬಳಿಕ ಭಾರತೀಯರಲ್ಲಿ ಪಾಕ್ ದ್ವೇಷ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರು 'ಪಾಕ್' ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ 'ಮೈಸೂರು ಪಾಕ್' ಹೆಸರನ್ನೂ ಕೂಡ ಬದಲಾಯಿಸಲಾಗಿದೆ.
'ಮೈಸೂರು ಪಾಕ್' ಹೆಸರನ್ನು 'ಮೈಸೂರು ಶ್ರೀ' ಎಂದು ಬದಲಾಯಿಸಲಾಗಿದ್ದು, ಮೈಸೂರು ಪಾಕ್ ಮಾತ್ರವಲ್ಲದೇ 'ಪಾಕ್' ಹೆಸರು ಬರುವ ಎಲ್ಲ ಸಿಹಿತಿನಿಸುಗಳ ಹೆಸರುಗಳನ್ನು 'ಶ್ರೀ'ಗೆ ಬದಲಿಸಲಾಗಿದೆ. ಸಿಹಿ ತಿನಿಸುಗಳಲ್ಲಿನ 'ಪಾಕ್' ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ಪಾಕ್ ಎಂಬ ಹೆಸರು ಇರಬಾರದು ಎಂದು ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
'ನಾವು ನಮ್ಮ ಸಿಹಿ ತಿನಿಸುಗಳ ಹೆಸರಿನಿಂದ 'ಪಾಕ್' ಪದವನ್ನು ತೆಗೆದುಹಾಕಿದ್ದೇವೆ. 'ಮೋತಿ ಪಾಕ್' ಅನ್ನು 'ಮೋತಿ ಶ್ರೀ' ಎಂದು, 'ಗೊಂಡ್ ಪಾಕ್' ಅನ್ನು 'ಗೊಂಡ್ ಶ್ರೀ' ಎಂದೂ, 'ಮೈಸೂರು ಪಾಕ್' ಅನ್ನು 'ಮೈಸೂರು ಶ್ರೀ' ಎಂದು ಮರುನಾಮಕರಣ ಮಾಡಿದ್ದೇವೆ' ಎಂದು ಅಂಗಡಿ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಕ್ ಹೆಸರಿಗೆ ವಿರೋಧ
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ವಿರುದ್ಧ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ನೇರ-ಪರೋಕ್ಷ ವಸ್ತು ಅಥವಾ ಹೆಸರಿಗೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕರಾಚಿ ಬೇಕರಿ ಮೇಲೂ ದಾಳಿ ನಡೆದಿತ್ತು. ಪಾಕಿಸ್ತಾನದ ನಗರ ಕರಾಚಿ ಹೆಸರು ಇರುವ ಕಾರಣಕ್ಕೆ ಕರಾಚಿ ಬೇಕರಿಯ ಬೋರ್ಡ್‌ಗಳನ್ನು ಉದ್ರಿಕ್ತರು ಕಿತ್ತು ಹಾಕಿದ್ದರು.
'ಪಾಕ್' ಗೂ ಪಾಕಿಸ್ತಾನಕ್ಕೂ ಏನು ಸಂಬಂಧ?
ಈ ಸಿಹಿ ತಿನಿಸುಗಳಲ್ಲಿರುವ 'ಪಾಕ್' ಎಂಬ ಪದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕನ್ನಡ ಪದವಾಗಿದ್ದು, ಪಾಕ ಪದವನ್ನು ಸಿಹಿ ತಿನಿಸುಗಳ ಹೆಸರಿನ ಜೊತೆ ಪಾಕ್ ಎಂದು ಬಳಸಲಾಗಿದೆ. ಕನ್ನಡದಲ್ಲಿ ಸಕ್ಕರೆ ಪಾಕ, ಬೆಲ್ಲದ ಪಾಕ ಹೀಗೆ ಪದಗಳು ಚಾಲ್ತಿಯಲ್ಲಿದ್ದು, ಇದೇ ರೀತಿ ಮೈಸೂರ್ ಪಾಕ್ ಪದ ಬಂದಿದೆ. 'ಮೈಸೂರು ಪಾಕ್' ಸಿಹಿ ತಿನಿಸು ಕರ್ನಾಟಕದ ಮೈಸೂರು ಮೂಲದ ಸಿಹಿ ತಿನಿಸಾಗಿದ್ದು, ಇಲ್ಲಿ 'ಪಾಕ್' ಎಂದರೆ ಸಕ್ಕರೆ ಪಾಕ ಎಂದರ್ಥ. ಆದರೆ ಇದರ ಅರ್ಥ ಗೊತ್ತಿಲ್ಲದೆ ವ್ಯಾಪಾರಿಗಳು ಹೆಸರನ್ನೇ ಬದಲಾಯಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಮೀಮ್ ಗಳ ಸುರಿಮಳೆ
ಪಾಕಿಸ್ತಾನ ಮತ್ತು ಭಾರತದ ಸಂಘರ್ಷದ ನಡುವಿನ ಸಂದರ್ಭದಲ್ಲಿ ಮೈಸೂರ್ ಪಾಕ್ ಹೆಸರನ್ನು ಮೈಸೂರ್ ಭಾರತ್ ಮಾಡಬೇಕು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡಿದ್ದವು. ಇದನ್ನೀಗ ವ್ಯಾಪಾರಿಗಳು ನಿಜ ಮಾಡಿದ್ದು, ಮೈಸೂರ್ ಪಾಕ್ ಹೆಸರನ್ನೂ ಬದಲಾಯಿಸಿದ್ದಾರೆ.
Advertisement