
ಬಹ್ರೇನ್: ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ತನ್ನ ನಿಲುವನ್ನು ವಿವರಿಸಲು ಸರ್ವಪಕ್ಷಗಳ ನಿಯೋಗವೊಂದು ಶನಿವಾರ ಬಹ್ರೇನ್ ತಲುಪಿದೆ. ಹಿರಿಯ ಬಿಜೆಪಿ ನಾಯಕ ಬೈಜಯಂತ್ ಜಯ ಪಾಂಡಾ ನೇತೃತ್ವದ ನಿಯೋಗವನ್ನು ರಾಯಭಾರಿ ವಿನೋದ್ ಕೆ ಜಾಕೋಬ್ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಹ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಜಯ ಪಾಂಡಾ ನೇತೃತ್ವದ ಸರ್ವಪಕ್ಷ ನಿಯೋಗವು ಬಹ್ರೇನ್‌ಗೆ ಆಗಮಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಭಾರತದ ಅಚಲವಾದ ನಿಲುವು ಎಲ್ಲಾ ಕಾರ್ಯಗಳಲ್ಲಿ ಎದ್ದು ಕಾಣಲಿದೆ ಎಂದು ಹೇಳಿದೆ.
ಇದೇ ನಿಯೋಗದಲ್ಲಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಹ್ರೇನ್ ನಂತರ, ಕುವೈತ್, ಸೌದಿ ಅರೇಬಿಯಾ, ಅಲ್ಜೀರಿಯಾಕ್ಕೆ ಭೇಟಿ ನೀಡುತ್ತಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಹೇಗೆ ಬೆಂಬಲಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ವಿವಿಧ ದೇಶಗಳ ಭೇಟಿ ವೇಳೆಯಲ್ಲಿ ಭಾರತದ ನಿಲುವನ್ನು ವಿವರಿಸಲಾಗುವುದು ಎಂದು ಹೇಳಿದ್ದಾರೆ.
ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆ ಕುರಿತು ವಿವರಿಸಲು 33 ಜಾಗತಿಕ ರಾಜಧಾನಿಗಳಿಗೆ ಭೇಟಿ ನೀಡಲಾಗುತ್ತಿರುವ ಏಳು ಬಹು-ಪಕ್ಷಗಳ ನಿಯೋಗಗಳಲ್ಲಿ ಈ ನಿಯೋಗವು ಒಂದಾಗಿದೆ. ಪಹಲ್ಗಾಮ್ ನಲ್ಲಿ ನಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿತ್ತು.
ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತವು ನಿಖರವಾದ ದಾಳಿಗಳನ್ನು ನಡೆಸಿತ್ತು. ತದನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಪ್ರಯತ್ನವನ್ನು ಭಾರತ ವಿಫಲಗೊಳಿಸಿತು.
Advertisement