
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಇದೀಗ ಅಂತಹುದೇ ಮತ್ತೊಂದು ಹುನ್ನಾರ ಬಾಂಗ್ಲಾದೇಶದ ಕಡೆಯಿಂದಲೂ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಬಾಂಗ್ಲಾದೇಶದಿಂದ ಭಾರತದಲ್ಲಿ ಜಮಾತ್-ಉಲ್-ಮುಜಾಹಿದ್ದೀನ್ ಗುಂಪು ಭಯೋತ್ಪಾದಕ ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ.
ಭಾರತ ಬಾಂಗ್ಲಾದೇಶದೊಂದಿಗೆ ಭೂ, ವಾಯು ಮತ್ತು ಜಲ ಮಾರ್ಗಗಳನ್ನು ಹಂಚಿಕೊಂಡಿದ್ದು, ಈ ಮೂರು ಮಾರ್ಗಗಳನ್ನು ಉಪಯೋಗಿಸಿಕೊಂಡು ಉಗ್ರ ದಾಳಿ ಸಂಘಟಿಸಲು ಹುನ್ನಾರ ನಡೆಯುತ್ತಿದೆ. ಹೀಗಾಗಿ ಗಡಿಯಲ್ಲಿ ಭದ್ರತೆ ಹೆಚ್ಚಿಸುವಂತೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಗುಪ್ತಚರ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರ ಕೂಡ ಈ ತಿಂಗಳ ಆರಂಭದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿತ್ತು ಎನ್ನಲಾಗಿದೆ.
ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದ ಪ್ರಯಾಣ ಮಾರ್ಗಗಳ ಮೇಲೆ ವಿಶೇಷ ಗಮನ ಹರಿಸಿ, ಭದ್ರತಾ ಗ್ರಿಡ್ ಅನ್ನು ಬಿಗಿಗೊಳಿಸಲು ಕೇಂದ್ರ ಮತ್ತು ರಾಜ್ಯ ಪಡೆಗಳ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಜೆಎಂಬಿ ಉಗ್ರ ಸಂಘಟನೆಯಿಂದ ಸಂಚು
ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಗುಂಪು ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಗಡಿಯಲ್ಲಿ ದಾಳಿ ಸಂಚು ರೂಪಿಸುತ್ತಿದ್ದು, ಉಗ್ರ ಸಂಘಟನೆಯ ಚಟುವಟಿಕೆಗಳು ತೀವ್ರವಾಗುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಈ ಗುಂಪು ತನ್ನ ಧ್ವಜಗಳನ್ನು ಬಹಿರಂಗವಾಗಿ ಪ್ರದರ್ಶಿಸಿ, ಗಾಜಾ ಸಂಘರ್ಷದ ಮಧ್ಯೆ ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸಿತ್ತು.
ಅಲ್ಲದೆ ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೆಎಂಬಿಯ ಪಾಕಿಸ್ತಾನ ಸಂಪರ್ಕ ಜಗಜ್ಜಾಹಿರಾಗಿತ್ತು. ಸಂಘಟನೆಗೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಬಂಗಾಳದಲ್ಲಿ ಬಂಧಿಸಲಾಗಿತ್ತು. ಬಂಧಿತರು ಬಾಂಗ್ಲಾದೇಶದ ಜೆಎಂಬಿ ಉಗ್ರ ನಾಯಕರ ನಿರ್ದೇಶನದ ಮೇಲೆ ಸಕ್ರಿಯರಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಗಡಿಯಲ್ಲಿ ಕಟ್ಟೆಚ್ಚರ
ಮೂಲಗಳ ಪ್ರಕಾರ, ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಗಳನ್ನು ಕಾಯುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತನ್ನ ನಿಯೋಜನಾ ಯೋಜನೆಯನ್ನು ಪುನರ್ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದು ಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದೆ. ಬಾಂಗ್ಲಾದೇಶದಿಂದ ವಿಮಾನಗಳು ಇಳಿಯುವ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಪ್ರದೇಶದ ವಿಮಾನ ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತಲಿನ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ಸ್ಥಳೀಯ ಪೊಲೀಸರನ್ನು ಕೇಳಲಾಗಿದೆ. ಹೆಚ್ಚಿದ ತಪಾಸಣೆ ಮತ್ತು ಪ್ರಯಾಣಿಕರ ಪರಿಶೀಲನೆಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
Advertisement