
ನವದೆಹಲಿ: 'ಆಪರೇಷನ್ ಸಿಂದೂರ್" ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 122ನೇ ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಭಾರತೀಯ ಸಶಸ್ತ್ರ ಪಡೆಗಳಿಂದ ನಾಶವಾದ ಭಯೋತ್ಪಾದಕ ತಾಣಗಳ ಚಿತ್ರಗಳನ್ನು ತೋರಿಸಿದರು.
ಏಪ್ರಿಲ್ 22 ರ ಮಾರಕ ಪಹಲ್ಗಾಮ್ ದಾಳಿಗೆ ಗಡಿಯಾಚೆಗಿನ ಸಂಪರ್ಕವನ್ನು ಕಂಡುಕೊಂಡ ನಂತರ, ಭಾರತವು ಮೇ 7 ರಂದು ಆಪರೇಷನ್ ಸಿಂದೂರ್ ನ್ನು ಪ್ರಾರಂಭಿಸಿತು. ಲಷ್ಕರ್-ಎ-ತೈಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳ ಬಹು ಶಿಬಿರಗಳನ್ನು ನಾಶಪಡಿಸಿತು. ಸಿಂದೂರ್ ಎಂಬ ಹಿಂದಿ ಪದವು "ಸಿಂಧೂರ್" ಆಗಿದ್ದು, ಹಿಂದೂ ಮಹಿಳೆಯರು ಮದುವೆಯ ಸಂಕೇತವಾಗಿ ಹಣೆಯ ಮೇಲೆ ಹಾಕಿಕೊಳ್ಳುವ ಕುಂಕುಮವಾಗಿದೆ.
ರಾತ್ರಿಯಿಡೀ ನಡೆದ ದಾಳಿಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ನಾಲ್ಕು ಭಯೋತ್ಪಾದಕ ಶಿಬಿರಗಳು ಮತ್ತು ಪಿಒಕೆಯಲ್ಲಿ ಐದು ಶಿಬಿರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದವು.
ದಾಳಿಗೆ ನಾಶವಾದ ತಾಣಗಳ ಚಿತ್ರಗಳನ್ನು ತೋರಿಸಿದ ಮೋದಿ
ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತೀಯ ಪಡೆಗಳು ನಡೆಸಿದ ಅಸಾಧಾರಣ ನಿಖರತೆ ದಾಳಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಪಿಒಕೆಯಲ್ಲಿ ನಾಶವಾದ ಸ್ಥಳಗಳಾದ ಕೋಟ್ಲಿಯ ಗುಲ್ಪುರ್ ಮತ್ತು ಅಬ್ಬಾಸ್ ಶಿಬಿರಗಳು ಮತ್ತು ಭಿಂಬರ್‌ನ ಬರ್ನಾಲಾ ಶಿಬಿರಗಳನ್ನು ತೋರಿಸಿದರು.
ಜಮ್ಮು-ಕಾಶ್ಮೀರದ ರಾಜೌರಿ ಮತ್ತು ಪೂಂಚ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್ ಭಯೋತ್ಪಾದಕರಿಗೆ ಗುಲ್ಪುರ ಶಿಬಿರವು ನೆಲೆಯಾಗಿದ್ದರೆ, ಅಬ್ಬಾಸ್ ಶಿಬಿರವು ಎಲ್‌ಇಟಿಯ ಆತ್ಮಹತ್ಯಾ ಬಾಂಬರ್‌ಗಳ ತರಬೇತಿಗೆ ಕೇಂದ್ರವೆಂದು ಕರೆಯಲ್ಪಡುತ್ತಿತ್ತು. ಬರ್ನಾಲಾ ಶಿಬಿರವನ್ನು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ನಿರ್ವಹಣೆ, ಐಇಡಿ ತಯಾರಿಕೆ ಮತ್ತು ಕಾಡಿನ ಬದುಕುಳಿಯುವ ತಂತ್ರಗಳಲ್ಲಿ ತರಬೇತಿ ನೀಡಲು ಬಳಸಲಾಗುತ್ತಿತ್ತು.
ಆಪರೇಷನ್ ಸಿಂದೂರ್ ಭಾರತಕ್ಕೆ ಹೊಸ ದಿಕ್ಕು ನೀಡುತ್ತದೆ
ಆಪರೇಷನ್ ಸಿಂದೂರ್ ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟಕ್ಕೆ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ತುಂಬಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆಪರೇಷನ್ ಸಿಂದೂರ್ ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ ಎಂದು ಅವರು ಹೇಳಿದರು.
ಮಧ್ಯರಾತ್ರಿ 1:05 ರಿಂದ ಬೆಳಗಿನ ಜಾವ 1:30 ರವರೆಗೆ ನಡೆದ ಈ ಕಾರ್ಯಾಚರಣೆಯು ಒಂದೇ ಬಾರಿಗೆ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಬದಲಾಗುತ್ತಿರುವ ಮತ್ತು ದೃಢನಿಶ್ಚಯದ ಭಾರತದ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಮಹತ್ವದ ತಿರುವು. ಇದು ಭಾರತದ ಬೆಳೆಯುತ್ತಿರುವ ಶಕ್ತಿ ಮತ್ತು ಉದ್ದೇಶದ ಸ್ಪಷ್ಟತೆಯ ಸಂಕೇತವಾಗಿದೆ ಎಂದು ಬಣ್ಣಿಸಿದರು.
ಭಯೋತ್ಪಾದನೆ ವಿರುದ್ಧ ಹೋರಾಟ
ಇಂದು ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗೂಡಿದೆ, ಆಕ್ರೋಶ ಮತ್ತು ದೃಢನಿಶ್ಚಯದಿಂದ ತುಂಬಿದೆ. ಆತ್ಮನಿರ್ಭರ ಭಾರತ'ದ ಮನೋಭಾವವನ್ನು ಅನುಸರಿಸಿ, ಕಾರ್ಯಾಚರಣೆಯ ಯಶಸ್ಸಿಗೆ ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯಗಳು ಕಾರಣ ಎಂದು ಅವರು ಹೇಳಿದರು.
ಇದು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಬಲದಿಂದ ಬೆಂಬಲಿತವಾದ ನಮ್ಮ ಸೈನಿಕರ ಅಂತಿಮ ಧೈರ್ಯ ಎಂದು ಪ್ರಧಾನಿ ಹೇಳಿದರು.
ಈ ಕಾರ್ಯಾಚರಣೆಯ ನಂತರ, ಇಡೀ ದೇಶದಲ್ಲಿ 'ವೋಕಲ್ ಫಾರ್ ಲೋಕಲ್' ಬಗ್ಗೆ ಹೊಸ ಶಕ್ತಿ ಕಾಣಿಸಿಕೊಂಡಿದೆ. ಪೋಷಕರೊಬ್ಬರು ನಾವು ಈಗ ನಮ್ಮ ಮಕ್ಕಳಿಗೆ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ ಎಂದು ಶಪಥ ಮಾಡಿದ್ದಾರೆ. ಇದು ಭಾರತದ ಒಗ್ಗಟ್ಟಿಗೆ ಸಾಕ್ಷಿ ಎಂಧು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ದೇಶದ ವಿವಿಧ ಭಾಗಗಳಲ್ಲಿ "ತಿರಂಗಾ ಯಾತ್ರೆ"ಗಳನ್ನು ಆಯೋಜಿಸಲಾಯಿತು. ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದು ಸೈನಿಕರಿಗೆ ಗೌರವ ಸಲ್ಲಿಸಿದರು. ಅನೇಕ ನಗರಗಳಲ್ಲಿ ಯುವಕರು ಸ್ವಯಂಪ್ರೇರಿತ ನಾಗರಿಕ ರಕ್ಷಣಾ ಕಾರ್ಯಕರ್ತರಾಗಿ ಸೇರಿಕೊಂಡರು. ಚಂಡೀಗಢದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಕವನಗಳನ್ನು ಬರೆಯಲಾಯಿತು ಮತ್ತು ದೇಶಭಕ್ತಿಯ ಹಾಡುಗಳನ್ನು ಹಾಡಲಾಯಿತು. ಮಕ್ಕಳು ಚಿತ್ರಗಳನ್ನು ರಚಿಸಿ ಅದರಲ್ಲಿ ದೇಶಭಕ್ತಿಯ ಸಂದೇಶಗಳನ್ನು ಬರೆದರು.
ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳಿಗೆ ಪ್ರಧಾನಿ ಭರವಸೆ
ಪಹಲ್ಗಾಮ್ ದುರಂತದ ನಂತರ ದುಃಖಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ದಾಳಿಯು ಕಾಶ್ಮೀರದ ಬೆಳೆಯುತ್ತಿರುವ ಶಾಂತಿ ಮತ್ತು ಪ್ರವಾಸೋದ್ಯಮವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಪ್ರಗತಿಯ ಶತ್ರುಗಳ ಹತಾಶ ಕೃತ್ಯವಾಗಿದೆ ಎಂದು ಅವರು ಪುನರುಚ್ಚರಿಸಿದರು.
Advertisement