
ನವದೆಹಲಿ: ಆಪರೇಷನ್ ಸಿಂಧೂರ್ ಕುರಿತು ಕೇಂದ್ರದ ಅಂತರರಾಷ್ಟ್ರೀಯ ಸಂಪರ್ಕದ ಭಾಗವಾಗಿರುವ ಕಾಂಗ್ರೆಸ್‌ನ ಶಶಿ ತರೂರ್, 2023 ರ ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದ್ದಕ್ಕಾಗಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ವಿರುದ್ಧದ ಬಿಕ್ಕಟ್ಟಿನಲ್ಲಿ ಪಾಕಿಸ್ತಾನಕ್ಕೆ ಟರ್ಕಿ ನೀಡಿದ ಬೆಂಬಲವನ್ನು ತರೂರ್ ಉಲ್ಲೇಖಿಸಿದ್ದಾರೆ.
X ನಲ್ಲಿ ಟರ್ಕಿಗೆ ಕೇರಳದ 10 ಕೋಟಿ ರೂ. ನೆರವಿನ ಬಗ್ಗೆ ಸುದ್ದಿಯನ್ನು ಪೋಸ್ಟ್ ಮಾಡಿದ ತರೂರ್, ಎಡ ಪ್ರಜಾಸತ್ತಾತ್ಮಕ ರಂಗ (LDF) ನೇತೃತ್ವದ ಸರ್ಕಾರ "ತನ್ನ ತಪ್ಪಾದ ಔದಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ" ಎಂದು ಹೇಳಿದ್ದಾರೆ.
"ಭಾರತದಿಂದ ನೆರವು ಪಡೆದ ಎರಡು ವರ್ಷಗಳ ನಂತರ ಟರ್ಕಿಯ ನಡವಳಿಕೆಯನ್ನು ನೋಡಿದ ನಂತರ, ಕೇರಳ ಸರ್ಕಾರ ತನ್ನ ತಪ್ಪಾದ ಔದಾರ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ನಾನು ಭಾವಿಸುತ್ತೇನೆ! ವಯನಾಡಿನ ಜನರು (ಕೇರಳದ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ) ಆ ಹತ್ತು ಕೋಟಿಗಳನ್ನು ಇನ್ನೂ ಉತ್ತಮವಾಗಿ ಬಳಸಬಹುದಿತ್ತು" ಎಂದು ಅವರ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಿಪಿಎಂನ ಜಾನ್ ಬ್ರಿಟಾಸ್ ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ಟರ್ಕಿಗೆ ಸಹಾಯಹಸ್ತ ಚಾಚಿ ಅದನ್ನು ಶಶಿ ತರೂರ್ ಪ್ರಶ್ನಿಸುತ್ತಿಲ್ಲ ಇದು ಕೇವಲ "ಜಾಣ ಮರೆವು" ಎಂದು ಹೇಳಿದ್ದಾರೆ. "ಶಶಿ ತರೂರ್‌ಗೆ ತುಂಬಾ ಧನ್ಯವಾದಗಳು. ಆದರೆ ಈ ಹೇಳಿಕೆ ಜಾಣ ಮರೆವಿನ ಲಕ್ಷಣಗಳಾಗಿವೆ" ಎಂದು ಸಿಪಿಎಂ ನಾಯಕ ತಮ್ಮ ಜಾಲತಾಣ ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಟರ್ಕಿಗೆ ಸಹಾಯ ಮಾಡಲು ಮೋದಿ ಸರ್ಕಾರವೇ ಆಪರೇಷನ್ ದೋಸ್ತ್ ನ್ನು ಪ್ರಾರಂಭಿಸಿತ್ತು ಎಂದು ಚೆನ್ನಾಗಿ ತಿಳಿದಿದ್ದರೂ ಅವರು ಕೇರಳವನ್ನು ಏಕೆ ಟೀಕಿಸುತ್ತಿದ್ದಾರೆ ಎಂಬುದು ಅಷ್ಟೇ ತಮಾಷೆ ಮತ್ತು ಗೊಂದಲಮಯವಾಗಿದೆ. ಕೇರಳದ ಮೇಲಿನ ದಾಳಿ ಅನಗತ್ಯ" ಎಂದು ಬರೆದಿದ್ದಾರೆ.
ಭಾರತದೊಂದಿಗಿನ ನಾಲ್ಕು ದಿನಗಳ ಸಶಸ್ತ್ರ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ನೀಡಿದ ಸಹಾಯದ ನಂತರ ಮೆಡಿಟರೇನಿಯನ್ ರಾಷ್ಟ್ರದ ವಿರುದ್ಧ ಸಾರ್ವಜನಿಕ ಭಾವನೆ ತೀವ್ರಗೊಂಡಿದೆ. ನಾಗರಿಕ ಸಮಾಜ ಟರ್ಕಿಯನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟಿದೆ. ವ್ಯಾಪಾರಿ ಸಂಘಗಳು ಟರ್ಕಿಶ್ ಸರಕುಗಳನ್ನು ಬಹಿಷ್ಕರಿಸಿವೆ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಟರ್ಕಿಶ್ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
Advertisement