
ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳುತ್ತಿದ್ದು, ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ಸರ್ಕಾರಿ ಅಂಕಿಅಂಶಗಳು ಸೋಮವಾರ ತಿಳಿಸಿವೆ.
ಕಳೆದ ವಾರದಲ್ಲಿ, ಏಳು ಜನ ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಮೇ 26 ರ ಹೊತ್ತಿಗೆ, ಭಾರತದಲ್ಲಿ 1,009 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 700 ಕ್ಕೂ ಹೆಚ್ಚು ಕಳೆದ ವಾರದಲ್ಲಿ ವರದಿಯಾಗಿವೆ.
ಆಗ್ನೇಯ ಏಷ್ಯಾದ ದೇಶಗಳಲ್ಲಿ, ವಿಶೇಷವಾಗಿ ಹಾಂಗ್ ಕಾಂಗ್, ಸಿಂಗಾಪುರ, ಚೀನಾ ಮತ್ತು ಥೈಲ್ಯಾಂಡ್‌ನಲ್ಲಿ ಪ್ರಕರಣಗಳ ತೀವ್ರ ಏರಿಕೆಯ ನಡುವೆಯೂ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆ ಕಂಡುಬಂದಿದೆ.
1,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಲ್ಲಿ, ಕೇರಳ 430 ಸಕ್ರಿಯ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಅಲ್ಲದೆ ದೇವರ ನಾಡು ಎರಡು ಸಾವುಗಳನ್ನು ಸಹ ವರದಿ ಮಾಡಿದೆ.
ಮಹಾರಾಷ್ಟ್ರವು 209 ಸಕ್ರಿಯ ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನಾಲ್ಕು ಸಾವುಗಳನ್ನು ವರದಿ ಮಾಡಿದೆ. ಮೇ 19 ರವರೆಗೆ ಕೇವಲ 56 ಪ್ರಕರಣಗಳು ದಾಖಲಾಗಿರುವುದರಿಂದ ಮಹಾರಾಷ್ಟ್ರದಲ್ಲಿ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ದೆಹಲಿಯಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೇ 19 ರಂದು ಕೇವಲ ಐದು ಪ್ರಕರಣಗಳಿದ್ದವು. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಈಗ 105 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ದತ್ತಾಂಶ ವಿಶ್ಲೇಷಕ ಕೃಷ್ಣ ಪ್ರಸಾದ್ ಹೇಳಿದ್ದಾರೆ.
"ದೆಹಲಿ ಕೇವಲ ಒಂದು ವಾರದಲ್ಲಿ ಪ್ರಕರಣಗಳಲ್ಲಿ ತೀವ್ರ ಏರಿಕೆಯನ್ನು ವರದಿ ಮಾಡಿದೆ. ಮೇ 19 ರಿಂದ 26ರ ವರೆಗೆ ದೆಹಲಿಯಲ್ಲಿ 99 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಮೇ 19 ರವರೆಗೆ ಕೇವಲ ಐದು ಪ್ರಕರಣಗಳು ಮಾತ್ರ ಇದ್ದವು" ಎಂದು ಕೇರಳ ಮೂಲದ ವಿಶ್ಲೇಷಕರು ತಿಳಿಸಿದ್ದಾರೆ.
Advertisement