
ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಆತ ಪಾಕಿಸ್ತಾನ ಬೆಂಬಲಿತ ಖಲಿಸ್ತಾನಿ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಜಿತಾ ಬೈಪಾಸ್ ರಸ್ತೆ ಬಳಿಯಲ್ಲಿರುವ ಡಿಸೆಂಟ್ ಅವೆನ್ಯೂ ಕಾಲೋನಿ ಬಳಿ ಈ ಘಟನೆ ನಡೆದಿದೆ. ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಮೃತನ ಎರಡೂ ತೋಳುಗಳು ಛಿದ್ರಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಮೃತ ವ್ಯಕ್ತಿಯ ಮತ್ತು ಆತನ ಸಹಚರರನ್ನು ಗುರುತಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ವ್ಯಕ್ತಿಯು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಬಲವಾದ ಪುರಾವೆಗಳು ತಮ್ಮ ಬಳಿ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಫೋಟದ ಮಾದರಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
'ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತ ಮೃತಪಟ್ಟನು. ನಮಗೆ ಸ್ಫೋಟದ ಬಗ್ಗೆ ಮಾಹಿತಿ ಸಿಕ್ಕಿತು ಮತ್ತು ಸ್ಥಳದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಕಂಡುಬಂದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೃತಸರ (ಗ್ರಾಮೀಣ) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್ ಮಾತನಾಡಿ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಆ ವ್ಯಕ್ತಿ ಸ್ಫೋಟಕಗಳನ್ನು ಪಡೆಯಲು ಬಂದಿದ್ದನು ಮತ್ತು ಬಾಂಬ್ ಅನ್ನು ಸರಿಯಾಗಿ ನಿರ್ವಹಿಸದ ಕಾರಣ ಸ್ಫೋಟ ಸಂಭವಿಸಿದೆ. ಇಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು ಮತ್ತು ಅದು ಬಹುಶಃ ಪಾಕಿಸ್ತಾನದಿಂದ ಬಂದಿರಬಹುದು ಮತ್ತು ಮೃತ ವ್ಯಕ್ತಿ ಅವುಗಳನ್ನು ತೆಗೆದುಕೊಳ್ಳಲು ಬಂದಿದ್ದನು' ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆ ಪ್ರಕಾರ, ಈ ಘಟನೆಯ ಹಿಂದೆ ಐಎಸ್‌ಐ ಬೆಂಬಲಿತ ಬಬ್ಬರ್ ಖಾಲ್ಸಾದ ಕೈವಾಡವಿದ್ದು, ಈ ಪ್ರದೇಶದಲ್ಲಿ ಶಾಂತಿ ಕದಡುವ ಗುರಿಯನ್ನು ಹೊಂದಿದ್ದರು ಎಂದು ಪೊಲೀಸ್ ಉಪ ಮಹಾನಿರ್ದೇಶಕ (ಗಡಿ ವ್ಯಾಪ್ತಿ) ಸತೀಂದರ್ ಸಿಂಗ್ ಹೇಳಿದ್ದಾರೆ.
ಆರಂಭದಲ್ಲಿ, ಪೊಲೀಸರು ಮೃತ ವ್ಯಕ್ತಿಯು ಚಿಂದಿ ಆಯುವ ವ್ಯಕ್ತಿಯಾಗಿರಬಹುದು ಎಂದು ಶಂಕಿಸಿದ್ದರು. ವ್ಯಕ್ತಿಯು ಲೋಹದ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಬಾಂಬ್ ಪತ್ತೆಯಾಗಿತ್ತು ಎನ್ನಲಾಗಿತ್ತು.
Advertisement