
ನವದೆಹಲಿ: ಭಾರತ-ಪಾಕಿಸ್ತಾನ "ಕದನ ವಿರಾಮ" ಹೇಗೆ ನಡೆಯಿತು ಎಂಬುದರ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪುನರಾವರ್ತಿತ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ "ಮೌನ" ಮುರಿಯಬೇಕೆಂದು ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.
"ಅಧ್ಯಕ್ಷ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ 'ಕದನ ವಿರಾಮ' ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮತ್ತು 'ಶಾಂತಿ'ಯನ್ನು ತರಲು ತಮ್ಮ ಸುಂಕ ಅಧಿಕಾರ ಬಳಸಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಮೇ 23, 2025 ರಂದು ನ್ಯೂಯಾರ್ಕ್ ಮೂಲದ ಯುಎಸ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಟ್ರೇಡ್‌ನಲ್ಲಿ ಹೇಳಿದ್ದು, ಇದು ನಿಜವೇ ಎಂಬುದನ್ನು ಪ್ರಧಾನಿ ಮೋದಿ ದೇಶಕ್ಕೆ ತಿಳಿಸಬೇಕು" ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಇದರ ಬಗ್ಗೆ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ ಎರಡೂ ಕಡೆಯ ಡಿಜಿಎಂಒಗಳ ನೇರ ಮಾತುಕತೆಯ ನಂತರ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಸಮರ್ಥಿಸಿಕೊಂಡಿದೆ.
ಈ ಕುರಿತು "X" ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, "ಶ್ರೀ ಲುಟ್ನಿಕ್ ಅವರು ಅಧ್ಯಕ್ಷ ಟ್ರಂಪ್ ಅವರ ನಿರ್ಧಾರಗಳನ್ನು ಅನುಸರಿಸುತ್ತಾರೆ. ಅವರು 3 ವಿಭಿನ್ನ ದೇಶಗಳಲ್ಲಿ 11 ದಿನಗಳಲ್ಲಿ 8 ಬಾರಿ ಈ ಪ್ರತಿಪಾದನೆಯನ್ನು ಮಾಡಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಇದನ್ನೇ ಹೇಳಿದ್ದಾರೆ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ 'ತಟಸ್ಥ ತಾಣ'ವನ್ನು ಸಹ ಉಲ್ಲೇಖಿಸಿದ್ದಾರೆ" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
"ಪ್ರಧಾನ ಮಂತ್ರಿಗಳೇ, ನಿಮ್ಮ ಮೌನವನ್ನು ಮುರಿಯಿರಿ" ಎಂದು ಕಾಂಗ್ರೆಸ್ ನಾಯಕ ಆಗ್ರಹಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ತಾವು ಸಹಾಯ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ.
Advertisement