
ಗುವಾಹಟಿ: ಲೋಕಸಭೆಯಲ್ಲಿನ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದು, ಅಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ನಿರಂತರವಾಗಿ ಆರೋಪ ಮಾಡಿಕೊಂಡು ಬರುತ್ತಿದೆ. ಈ ಕುರಿತು ಬುಧವಾರ ಗೊಗೊಯ್ ಸ್ಪಷ್ಟನೆ ನೀಡಿದ್ದಾರೆ. 12 ವರ್ಷದ ಹಿಂದೆ ಒಂದು ಬಾರಿ ಮಾತ್ರ ಪಾಕಿಸ್ತಾನಕ್ಕೆ ಹೋಗಿದ್ದೆ. ಈ ವಿಚಾರವನ್ನು ಬಿಜೆಪಿ ಸಿ-ಗ್ರೇಡ್ ಬಾಲಿವುಡ್ ಸಿನಿಮಾದಂತೆ ಎಳೆಯುತ್ತಿದೆ. ಅದು ದಯನೀಯವಾಗಿ ಫ್ಲಾಪ್ ಆಗುತ್ತಿದೆ ಎಂದರು.
ಒಂದು ವೇಳೆ ಏನಾದರೂ ತಪ್ಪಾಗಿದ್ದರೆ ಕಳೆದ 11 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಗೊಗೊಯ್, ತಮ್ಮ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುವ ಉದ್ದೇಶದಿಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಅದು ನಿರಾಧಾರ ಎಂದು ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೊಗೊಯ್, ರಾಜ್ಯದ ಜನರನ್ನು ದಾರಿ ತಪ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಸುಮಾರು 14-15 ವರ್ಷಗಳ ಹಿಂದೆ, ಸಾರ್ವಜನಿಕ ನೀತಿಯಲ್ಲಿ ಪರಿಣಿತರಾಗಿರುವ ನನ್ನ ಪತ್ನಿ, ದಕ್ಷಿಣ ಏಷ್ಯಾದಲ್ಲಿ ಹವಾಮಾನ ಬದಲಾವಣೆ ಕೇಂದ್ರೀಕರಿಸಿದ ಅಂತರರಾಷ್ಟ್ರೀಯ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು 2012-13 ರ ಸುಮಾರಿಗೆ ಭಾರತಕ್ಕೆ ಮರಳುವ ಮೊದಲು ಪಾಕಿಸ್ತಾನದಲ್ಲಿ ಒಂದು ವರ್ಷ ಕೆಲಸ ಮಾಡಿರುವುದಾಗಿ ತಿಳಿಸಿದರು.
ಆಗಿನಿಂದಲೂ ಅವರು ತಮ್ಮ ಕೆಲಸವನ್ನು ಮುಂದುವರೆಸಿದ್ದರು. 2015 ರಲ್ಲಿ ಹೊಸ ಉದ್ಯೋಗ ಪಡೆದರು. 2013 ರಲ್ಲಿ ನಾನು ಕೂಡಾ ಆಕೆಯೊಂದಿಗೆ ಪಾಕಿಸ್ತಾನಕ್ಕೆ ಹೋಗಿದ್ದ ನೆನಪಿದೆ. ಮಾನನಷ್ಟ ಮಾಡುವುದೇ ಬಿಜೆಪಿಗರ ಕೆಲಸ. ಈ ವಿಚಾರವನ್ನು ಸಿ-ಗ್ರೇಡ್ ಬಾಲಿವುಡ್ ಸಿನಿಮಾದಂತೆ ಎಳೆಯುತ್ತಿದ್ದು, ಸೆಪ್ಟೆಂಬರ್ 10 ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಇದು ದಯನೀಯವಾಗಿ ಫ್ಲಾಪ್ ಆಗುತ್ತದೆ ಎಂದರು. ನಾನಾಗಲೀ ಅಥವಾ ನನ್ನ ಪತ್ನಿಯಾಗಲಿ ಏನಾದರೂ ತಪ್ಪು ಮಾಡಿದ್ದರೆ ಕಳೆದ 11 ವರ್ಷಗಳಲ್ಲಿ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ? ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಏನು ಮಾಡುತ್ತಿವೆ ಎಂದು ಅವರು ಪ್ರಶ್ನಿಸಿದರು.
ಗೊಗೊಯ್ ಸ್ಪಷ್ಟನೆ ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ, ಕೊನೆಗೂ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದು ಕೇವಲ ಆರಂಭವಾಗಿದೆ, ಅಂತ್ಯವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ. ಮುಂದಿರುವುದು ಮತ್ತಷ್ಟು ಗಂಭೀರವಾಗಿದೆ. ಪ್ರತಿಯೊಂದಕ್ಕೂ ಸಮಂಜಸವಾದ ಆಧಾರವಿದೆ, ನಂಬಲರ್ಹ ಮಾಹಿತಿಗಳು, ದಾಖಲೆಗಳು ಇರುವುದಾಗಿ ತಿಳಿಸಿದ್ದಾರೆ.
Advertisement