
ನವದೆಹಲಿ: ಆಪರೇಷನ್ ಸಿಂಧೂರ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪ ಹೊತ್ತಿರುವ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ. ಅಲ್ಲದೆ ವಾಕ್ ಮತ್ತು ಅಭಿವ್ಯಕ್ತಿ ಹಕ್ಕಿನ ಮೇಲೆ ಯಾವುದೇ ನಿರ್ಬಂಧ ಇಲ್ಲ. ಆದರೆ ಅವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಆನ್‌ಲೈನ್‌ನಲ್ಲಿ ಏನನ್ನೂ ಪೋಸ್ಟ್ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತ ಅವರ ಪೀಠ, ಆರೋಪಿ ಪ್ರಾಧ್ಯಾಪಕರಿಗೆ ನೀಡಲಾದ ಮಧ್ಯಂತರ ಜಾಮೀನನ್ನು ವಿಸ್ತರಿಸುತ್ತಿರುವುದಾಗಿ ಮತ್ತು ಮುಂದಿನ ವಿಚಾರಣೆಯ ದಿನಾಂಕದಂದು ತನಿಖಾ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಿದೆ.
ಇದೇ ವೇಳೆ ಮೇ 21 ರಂದು ಅಲಿ ಖಾನ್ ಅವರಿಗೆ ನೀಡಲಾದ ಮಧ್ಯಂತರ ಜಾಮೀನು ಷರತ್ತನ್ನು ಮಾರ್ಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ತಮ್ಮ ವಿವಾದಾತ್ಮಕ ಆನ್‌ಲೈನ್ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಆನ್‌ಲೈನ್ ಪೋಸ್ಟ್, ಲೇಖನ ಅಥವಾ ಯಾವುದೇ ಮೌಖಿಕ ಭಾಷಣ ಮಾಡಬಾರದು. ಇದು ತನಿಖೆಯ ವಿಷಯವಾಗಿದೆ ಎಂದು ಹೇಳಿದೆ.
ಭಾರತೀಯ ನೆಲದಲ್ಲಿ ನಡೆದ ಭಯೋತ್ಪಾದಕ ದಾಳಿ ಅಥವಾ ಭಾರತೀಯ ಸಶಸ್ತ್ರ ಪಡೆಗಳು ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದಂತೆ ಉನ್ನತ ನ್ಯಾಯಾಲಯವು ಪ್ರಾಧ್ಯಾಪಕರಿಗೆ ನಿರ್ಬಂಧಿಸಿತ್ತು.
ಆಪರೇಷನ್ ಸಿಂಧೂರ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಮೇಲೆ ಅಲಿ ಖಾನ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಅವರಿಗೆ ಮೇ 21 ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Advertisement