
ನವದೆಹಲಿ: ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ʼಆಪರೇಷನ್ ಸಿಂದೂರ್ʼ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಅಶೋಕ ವಿವಿ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
ಅಲಿ ಖಾನ್ ವಿರುದ್ಧ ಹರಿಯಾಣ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ತಡೆಹಿಡಿಯಲು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ನಿರಾಕರಿಸಿದ್ದು, ಪ್ರಕರಣದ ತನಿಖೆಗಾಗಿ ಐಜಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸುವಂತೆ ಹರಿಯಾಣ ಡಿಜಿಪಿಗೆ ನಿರ್ದೇಶಿಸಿತು. ಬಳಿಕ ಅಲಿ ಅವರಿಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.
ಜಾಮೀನು ಬಾಂಡ್‌ಗಳನ್ನು ಒದಗಿಸಿದರೆ ಅರ್ಜಿದಾರರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ. ಎರಡೂ ಎಫ್‌ಐಆರ್‌ಗಳಿಗೆ ಒಂದೇ ಸೆಟ್ ಜಾಮೀನು ಬಾಂಡ್‌ಗಳು ಇರಬೇಕು ಎಂದು ನ್ಯಾಯಾಲಯ ಆದೇಶಿಸಿತು.
ಹೆಚ್ಚುವರಿಯಾಗಿ, ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷಕ್ಕೆ ಸಂಬಂಧಿಸಿದ ಯಾವುದೇ ಆನ್‌ಲೈನ್ ವಿಷಯವನ್ನು ಮಹ್ಮದಾಬಾದ್ ಪೋಸ್ಟ್ ಮಾಡದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿತು.
ಈ ಪ್ರಕರಣದ ವಿಷಯಗಳ ಕುರಿತು ಯಾವುದೇ ಲೇಖನ ಅಥವಾ ಆನ್‌ಲೈನ್ ಪೋಸ್ಟ್‌ಗಳನ್ನು ಮಾಡಬಾರದು ಮತ್ತು ಯಾವುದೇ ಭಾಷಣ ಮಾಡಬಾರದು. ಇತ್ತೀಚೆಗೆ ಭಾರತ ಎದುರಿಸಿದ ಬಿಕ್ಕಟ್ಟಿನ ಬಗ್ಗೆ, ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಅಥವಾ ನಮ್ಮ ರಾಷ್ಟ್ರ ನೀಡಿದ ಪ್ರತಿ ಪ್ರತಿಕ್ರಿಯೆಯ ಬಗ್ಗೆ ಯಾವುದೇ ಕಾಮೆಂಟ್‌ಗಳನ್ನು ಮಾಡದಂತೆ ಸೂಚಿಸಿತು.
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಸೋನಿಪತ್ ಪೊಲೀಸರು ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹಮೂದಾಬಾದ್ ಅವರನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ, ಪೊಲೀಸರು ಜಥೇಡಿ ಗ್ರಾಮದ ಸರಪಂಚರ ಹೇಳಿಕೆಯನ್ನು ದಾಖಲಿಸಿಕೊಂಡು, ನಂತರ ಸಹಾಯಕ ಪ್ರಾಧ್ಯಾಪಕರನ್ನು ಬಂಧಿಸಿದ್ದರು.
ಇದರ ಬೆನ್ನಲ್ಲೇ ಅಲಿ ಖಾನ್ ಮಹ್ಮದಾಬಾದ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬಿಜೆಪಿ ಯುವ ಮೋರ್ಚಾದ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ಆರೋಪಿ ಅಲಿ ಖಾನ್ ಮಹ್ಮದಾಬಾದ್ ಅಶೋಕ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರು. ಹರಿಯಾಣ ರಾಜ್ಯ ಮಹಿಳಾ ಆಯೋಗವು ಸಹಾಯಕ ಪ್ರಾಧ್ಯಾಪಕರಿಗೆ ನೋಟಿಸ್ ಸಹ ನೀಡಿತ್ತು.
Advertisement