
ನವದೆಹಲಿ: 40 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಆರೋಪಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ಒಂಬತ್ತು ತಿಂಗಳಿನಿಂದ ಜೈಲಿನಲ್ಲಿದ್ದರೂ ಆರೋಪಿ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಆಗಿಲ್ಲ ಎಂದು ಹೇಳಿದೆ. ಅಲ್ಲದೆ ಅತ್ಯಾಚಾರವಾಗಿದೆ ಎಂದು ಹೇಳುವ ಮಹಿಳೆ ಮಗುವಲ್ಲ, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು, ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವ ಹೊಂದಿರುವ ಯುವಕನೊಂದಿಗೆ ಮಹಿಳೆ ಸ್ವಯಂಪ್ರೇರಣೆಯಿಂದ ಹೋಗಿದ್ದಾಗ ದೆಹಲಿ ಪೊಲೀಸರು ಹೇಗೆ ಅತ್ಯಾಚಾರ ಪ್ರಕರಣ ದಾಖಲಿಸಿದರು ಎಂದು ಟೀಕಿಸಿದ್ದಾರೆ.
ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ನೀವು ಯಾವ ಆಧಾರದ ಮೇಲೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೀರಿ. ಆಕೆ ಮಗುವಲ್ಲ. ಮಹಿಳೆಗೆ 40 ವರ್ಷ. ಅವರಿಬ್ಬರು ಒಟ್ಟಿಗೆ ಜಮ್ಮುವಿಗೆ 7 ಸಲ ಹೋಗಿದ್ದರು. ಆಕೆಯ ಪತಿಯೇ ಆಕ್ಷೇಪವೆತ್ತಲಿಲ್ಲ, ಹೀಗಿರುವಾಗ ಇದನ್ನು ಅತ್ಯಾಚಾರ ಎಂದು ಹೇಗೆ ಕರೆಯುವಿರಿ ಎಂದು ಕಠು ಶಬ್ದಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ.
ಆರೋಪಿ ಒಂಬತ್ತು ತಿಂಗಳಿನಿಂದ ಜೈಲಿನಲ್ಲಿದ್ದು, ಪ್ರಕರಣದಲ್ಲಿ ಆರೋಪಗಳನ್ನು ಹೊರಿಸಲಾಗಿಲ್ಲವಾದ್ದರಿಂದ ಇದು ಮಧ್ಯಂತರ ಜಾಮೀನು ನೀಡಲು ಸೂಕ್ತವಾದ ಪ್ರಕರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಮಧ್ಯಂತರ ಜಾಮೀನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆತ ಮುಂದಿನ ದಿನಗಳಲ್ಲಿ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಬಾರದು ಎಂದು ಪೀಠ ಹೇಳಿದೆ.
ಇದೇ ಸಂದರ್ಭದಲ್ಲಿ ಯುವಕನ ಬಗ್ಗೆ ಟೀಕಿಸಿರುವ ಸುಪ್ರೀಂ ಕೋರ್ಟ್ ಇಂತಹ ಜನರಿಂದ ಯಾರು ಪ್ರಭಾವಿತರಾಗುತ್ತಾರೆ ಎಂದು ಕೇಳಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ಆದೇಶದ ವಿರುದ್ಧ ಆ ವ್ಯಕ್ತಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
ಮಹಿಳೆ ನೀಡಿದ ದೂರು ಏನು?
ಪೊಲೀಸ್ ದೂರಿನ ಪ್ರಕಾರ, ಮಹಿಳೆ ಮೊದಲು 2021 ರಲ್ಲಿ ತನ್ನ ಬಟ್ಟೆ ಬ್ರ್ಯಾಂಡ್ ನ್ನು ಪ್ರಚಾರ ಮಾಡಲು ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಹುಡುಕುವಾಗ ಈ ಯುವಕ ಕಣ್ಣಿಗೆ ಬಿದ್ದನು. ಸೋಷಿಯಲ್ ಮೀಡಿಯಾ ಮೂಲಕ ಆತನನ್ನು ಸಂಪರ್ಕಿಸಿ ಪರಿಚಯ ಸ್ನೇಹವಾಗಿ ಆತನಿಗೆ ಐಫೋನ್ ಕೊಡಿಸಿದ್ದಳು.
ಆರೋಪಿಯು ಅದನ್ನು ಮರುಮಾರಾಟ ಮಾಡಲು ಪ್ರಯತ್ನಿಸಿದ ನಂತರ ಅವರ ವೃತ್ತಿಪರ ಸಂಬಂಧ ಹದಗೆಟ್ಟಿತು. ಆತ 20 ಸಾವಿರ ರೂಪಾಯಿಯನ್ನು ಆಕೆಗೆ ನೀಡುವುದಾಗಿ ಹೇಳಿದ್ದರೂ ಸ್ವಲ್ಪ ಸಮಯದ ನಂತರ ಮಹಿಳೆ ತನ್ನೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಲು ನಿರ್ಧರಿಸಿದಳು.
ಡಿಸೆಂಬರ್ 2021 ರಲ್ಲಿ, ಆ ವ್ಯಕ್ತಿ ನೋಯ್ಡಾದಲ್ಲಿರುವ ಮಹಿಳೆಯ ಮನೆಗೆ ಭೇಟಿ ನೀಡಿ 20,000 ರೂ.ಗಳನ್ನು ಹಿಂದಿರುಗಿಸಿ ಕ್ಷಮೆಯಾಚಿಸಿದ. ನಂತರ ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಲಿರುವ ಬ್ರಾಂಡ್ ಶೂಟಿಂಗ್‌ಗೆ ಪ್ರಯಾಣಿಸಲು ಆಕೆಯನ್ನು ಮನವೊಲಿಸಿದ. ಪ್ರಯಾಣದ ಸಮಯದಲ್ಲಿ, ಆರೋಪಿಯು ಆಕೆಗೆ ಮಾದಕ ದ್ರವ್ಯ ಬೆರೆಸಿದ ಸಿಹಿತಿಂಡಿಗಳನ್ನು ನೀಡಿ ಪ್ರಜ್ಞೆ ತಪ್ಪಿಸುತ್ತಾನೆ.
ಪ್ರಜ್ಞೆ ತಪ್ಪಿದ ಮಹಿಳೆಯನ್ನು ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಭರವಸೆ ನೀಡಿ ಆಕೆಯನ್ನು ಆಸ್ಪತ್ರೆಯ ಹಿಂದಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಪರ್ಸ್‌ನಿಂದ ಹಣವನ್ನು ಕದ್ದು ಆಕೆಯ ನಗ್ನ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ, ಮಹಿಳೆಯನ್ನು ಜಮ್ಮುವಿಗೆ ಪ್ರಯಾಣಿಸಲು ಒತ್ತಾಯಿಸಲಾಯಿತು, ಅಲ್ಲಿ ಎರಡೂವರೆ ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ, ಸುಲಿಗೆ ಮತ್ತು ಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿದೆ.
Advertisement