
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗಾಗಿ 42,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನೊಳಗೊಂಡ 580 ತುಕಡಿಗಳ ನಿಯೋಜನೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
580 ತುಕಡಿಗಳ ಪೈಕಿ 424 ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಗೊಂಡ ಸುಮಾರು 80 ತುಕಡಿಗಳು ಸೇರಿದಂತೆ ಉಳಿದವುಗಳನ್ನು ಯಾತ್ರಾ ಮಾರ್ಗ, ಯಾತ್ರಿಕರು ಮತ್ತು ಶ್ರೀನಗರ ಮತ್ತಿತರ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಜೂನ್ ಎರಡನೇ ವಾರದೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗುವಂತೆ ಕೇಂದ್ರ ಗೃಹ ಸಚಿವಾಲಯ ಈ ಪಡೆಗಳಿಗೆ ಆದೇಶಿಸಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅಮರನಾಥ ಯಾತ್ರೆಯು ಜುಲೈ 3 ರಂದು ಪ್ರಾರಂಭವಾಗಿ ಆಗಸ್ಟ್ 9 ರಂದು ಕೊನೆಗೊಳ್ಳಲಿದೆ.
ಏಪ್ರಿಲ್ 22 ರ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಜನರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಬಾರಿಯ ಅಮರನಾಥ ಯಾತ್ರೆಗೆ ಸುಮಾರು 580 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.
ಇದರಲ್ಲಿ ಈಗಾಗಲೇ 150-160 ತುಕಡಿಗಳು ಕೇಂದ್ರಾಡಳಿತ ಪ್ರದೇಶದಲ್ಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement