'ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ...': BJP 'ಸೂಪರ್ ವಕ್ತಾರ' ಎಂದ ಕಾಂಗ್ರೆಸ್'ಗೆ ಶಶಿ ತರೂರ್ ತಿರುಗೇಟು

ನಾನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಭಯೋತ್ಪಾದಕ ದಾಳಿಗಳ ವಿರುದ್ಧ ಪ್ರತೀಕಾರದ ಕುರಿತು ಮಾತ್ರ ಮಾತನಾಡುತ್ತಿದ್ದೇನೆಯೇ ಹೊರತು, ಹಿಂದಿನ ಯುದ್ಧಗಳ ಕುರಿತಂತಲ್ಲ.
Shashi Tharoor
ಶಶಿ ತರೂರ್File Photo
Updated on

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಈ ಕಾರ್ಯಾಚರಣೆ ಇದೀಗ ಇಡೀ ವಿಶ್ವದಾದ್ಯಂತ ಪ್ರತಿಧ್ವನಿಸುತ್ತಿದೆ. ಆದರೆ, ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಹಲವು ಟೀಕೆಗಳನ್ನು ಮಾಡುತ್ತಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ತಿರುಗೇಟು ನೀಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆ ಎತ್ತಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು, ಕಾಂಗ್ರೆಸ್ ಸರ್ಕಾರ ಪಾಕಿಸ್ತಾನದ ಮೇಲೆ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಆದರೆ, ಪಕ್ಷ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಸೈನ್ಯದ ಶಕ್ತಿ ಮತ್ತು ಧೈರ್ಯ ಅವರೊಂದಿಗೇ ಇತ್ತು ಮತ್ತು ಅದು ಅವರೊಂದಿಗೇ ಉಳಿಯಬೇಕು. ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಅದ್ಭುತವಾಗಿ ನಡೆಸಿತು, ಅದಕ್ಕೆ ಸೆಲ್ಯೂಟ್. ಆದರೆ, ಪ್ರಚಾರ ಮಾಡುತ್ತಿರುವ ಬಿಜೆಪಿ ಯಾವ ಸರ್ಜಿಕಲ್ ಸ್ಟ್ರೈಕ್ ನಡೆಸಿತು? ಕಾಂಗ್ರೆಸ್‌ಗೆ ಸೈನ್ಯವನ್ನು ಹೇಗೆ ಗೌರವಿಸಬೇಕೆಂದು ತಿಳಿದಿದೆ, ಆದರೆ, ಬಿಜೆಪಿ ಸೈನ್ಯವನ್ನು ಹೇಗೆ ಗೌರವಿಸುತ್ತದೆ ಮತ್ತು ಅದರ ಕೀರ್ತಿಯನ್ನು ಹೇಗೆ ತೆಗೆದುಕೊಳ್ಳುತ್ತದೆ? ಸೇನೆಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದರು.

ಇದೇ ವೇಳೆ ಶಶಿ ತರೂರ್ ವಿರುದ್ಧವೂ ಟೀಕೆ ಮಾಡಿದ್ದ ಅವರು, 2016ರ ಸರ್ಜಿಕಲ್ ಸ್ಟ್ರೈಕ್'ಗೂ ಮುಂದೆ ಭಾರತ ಎಂದಿಗೂ ಎಲ್ಒಸಿ ಅಂತರಾಷ್ಟ್ರೀಯ ಗಡಿ ದಾಟಿರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ನಿಮ್ಮನ್ನು ಬಿಜೆಪಿಯ ಸೂಪರ್ ವಕ್ತಾರರೆಂದು ಘೋಷಿಸಬೇಕೆಂದು ಒತ್ತಾಯಿಸುತ್ತೇನೆ. ಭಾರತಕ್ಕೆ ಬರುವ ಮೊದಲು ನಿಮ್ಮನ್ನು ವಿದೇಶಾಂಗ ಸಚಿವ ಎಂದೂ ಘೋಷಿಸಬೇಕೆಂದು ತಿಳಿಸಿದ್ದರು.

ಈ ಟೀಕೆಗೆ ಇದೀಗ ತಿರುಗೇಟು ನೀಡಿರುವ ಶಶಿ ತರೂರ್ ಅವರು, ಪನಾಮದಲ್ಲಿನ ಸುದೀರ್ಘ ಹಾಗೂ ಯಶಸ್ವಿ ದಿನದ ನಂತರ, ನಾನು ಮಧ್ಯರಾತ್ರಿಯಲ್ಲಿ ನನ್ನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದು, ಇನ್ನು 6 ಗಂಟೆಗಳಲ್ಲಿ ಬೊಗೊಟಾ, ಕೊಲಂಬಿಯಾಗೆ ತೆರಳಬೇಕಿದೆ. ಹೀಗಾಗಿ, ನನಗೆ ಇದಕ್ಕೆಲ್ಲ ಯಾವುದೇ ಸಮಯವಿಲ್ಲ. ಆದರೆ, ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಯೋಧರು ತೋರಿರುವ ಪರಾಕ್ರಮದ ಬಗ್ಗೆ ನಾನು ತೋರಿರಬಹುದಾದ ನಿರ್ಲಕ್ಷ್ಯದ ಕುರಿತು ಅಸೂಯೆಯಿಂದ ಕುದಿಯುತ್ತಿರುವರಿಗೆ, "ನಾನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಭಯೋತ್ಪಾದಕ ದಾಳಿಗಳ ವಿರುದ್ಧ ಪ್ರತೀಕಾರದ ಕುರಿತು ಮಾತ್ರ ಮಾತನಾಡುತ್ತಿದ್ದೇನೆಯೇ ಹೊರತು, ಹಿಂದಿನ ಯುದ್ಧಗಳ ಕುರಿತಂತಲ್ಲ.

Shashi Tharoor
ಶಶಿ ತರೂರ್ ಬಿಜೆಪಿಯ 'ಸೂಪರ್ ವಕ್ತಾರ' ಆಗಿದ್ದಾರೆ: ಕಾಂಗ್ರೆಸ್ ಕಿಡಿ

ಇತ್ತೀಚಿನ ವರ್ಷಗಳೊಂದರಲ್ಲೇ ನಡೆದಿರುವ ಹಲವಾರು ಭಯೋತ್ಪಾದಕ ದಾಳಿಗಳ ಉಲ್ಲೇಖಗಳನ್ನು ಆಧರಿಸಿ ನನ್ನ ಹೇಳಿಕೆಗಳಿದ್ದು, ಈ ಹಿಂದೆ ಭಾರತದ ಪ್ರತಿಕ್ರಿಯೆಯನ್ನು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ಬಗೆಗಿನ ನಮ್ಮ ಜವಾಬ್ದಾರಿಯುತ ಗೌರವಕ್ಕೆ ಮಾತ್ರ ನಿರ್ಬಂಧಿಸಲಾಗಿತ್ತು ಹಾಗೂ ಸೀಮಿತಗೊಳಿಸಲಾಗಿತ್ತು" ಎಂದು ತಿಳಿಸಲು ಬಯಸುತ್ತೇನೆ. ಆದರೆ, ನನ್ನ ದೃಷ್ಟಿಕೋನ ಹಾಗೂ ಮಾತುಗಳನ್ನು ತಮಗೆ ಬೇಕಾದಂತೆ ವಿರೂಪಗೊಳಿಸಲು ಎಂದಿನಿಂತೆ ಟೀಕಾಕಾರರಿಗೆ ಹಾಗೂ ಟ್ರೋಲರ್‌ಗಳಿಗೆ ಸ್ವಾಗತ. ಅದರೆ, ನಿಜವಾಗಿಯೂ ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ ಎಂದು ಹೇಳಿದ್ದಾರೆ.

ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುರಿತು ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಕೇಂದ್ರ ಸರಕಾರದ ಪ್ರಯತ್ನದ ಭಾಗವಾಗಿ ವಿದೇಶಗಳಿಗೆ ತೆರಳಿರುವ ಭಾರತೀಯ ನಿಯೋಗವನ್ನು ಶಶಿ ತರೂರ್ ಮುನ್ನಡೆಸುತ್ತಿದ್ದಾರೆ. ಅಮೆರಿಕ ಮತ್ತು ಪನಾಮಾದಲ್ಲಿನ ಕಾರ್ಯಕ್ರಮಗಳ ನಂತರ, ಭಾರತೀಯ ನಿಯೋಗವು ಇದೀಗ ಬೊಗೊಟಾದತ್ತ ಪ್ರಯಾಣ ಬೆಳೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com