
ಕೋಲ್ಕತ್ತಾ: "ವಿರೋಧ ಪಕ್ಷಗಳು ದೇಶವನ್ನು ಪ್ರತಿನಿಧಿಸುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದ್ದನ್ನು ಕೇಳಿ ನಮಗೆ ಆಘಾತ ಮಾತ್ರವಲ್ಲದೆ ತುಂಬಾ ದುಃಖವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.
"ಮೋದಿ ಜಿ ಅವರ ಸಮ್ಮುಖದಲ್ಲಿ ಅವರ ಸಚಿವರು ಆಪರೇಷನ್ ಸಿಂಧೂರ್ ನಂತೆ ಆಪರೇಷನ್ ಬಂಗಾಳ ಮಾಡುವುದಾಗಿ ಹೇಳಿದರು. ನಾನು ಅವರಿಗೆ ಸವಾಲು ಹಾಕುತ್ತೇನೆ - ಅವರಿಗೆ ತಾಕತ್ ಇದ್ದರೆ, ನಾಳೆಯೇ ಚುನಾವಣೆ ಘೋಷಿಸಲಿ. ನಾವು ಎದರಿಸಲು ಸಿದ್ಧರಿದ್ದೇವೆ ಮತ್ತು ಬಂಗಾಳ ನಿಮ್ಮ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದೆ. ಆದರೆ ದಯವಿಟ್ಟು ನೆನಪಿಡಿ, ಸಮಯ ಒಂದೇ ರೀತಿ ಇರುವುದಿಲ್ಲ. ನೀವು ಸಮಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ನಮ್ಮ ಪ್ರತಿನಿಧಿ ಅಭಿಷೇಕ್ ಬ್ಯಾನರ್ಜಿ ಕೂಡ ವಿರೋಧ ಪಕ್ಷಗಳ ಸಂಸದರ ತಂಡದಲ್ಲಿದ್ದಾರೆ ಮತ್ತು ಅವರು ಪ್ರತಿದಿನ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನೀವು ಪ್ರಧಾನಿಯಾಗಿ ಅಲ್ಲ, ಬಿಜೆಪಿ ನಾಯಕರಾಗಿ ಬಂಗಾಳದಲ್ಲಿ ನಮ್ಮ ಸರ್ಕಾರವನ್ನು ಟೀಕಿಸುತ್ತಿದ್ದೀರಿ. ನಮ್ಮ ಸರ್ಕಾರ ಭಯೋತ್ಪಾದನೆಯ ವಿರುದ್ಧ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಆದರೂ ನೀವು ನಮ್ಮ ಸರ್ಕಾರವನ್ನು ವಿನಾಕಾರಣ ದೂಷಿಸುತ್ತಿದ್ದೀರಿ” ಎಂದು ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ.
ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಸರಿ ಇಲ್ಲ, ಮಹಿಳೆಯರಲ್ಲಿ ಅಭದ್ರತೆ, ನಿರುದ್ಯೋಗ, ಭ್ರಷ್ಟಾಚಾರದಿಂದ ಬಳಲುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷದ ಸ್ವಾರ್ಥ ರಾಜಕೀಯವು ಬಡ ಜನರ ನ್ಯಾಯಯುತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಇಂದು ದೀದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
Advertisement