
ನವದೆಹಲಿ: 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆ ಭಾರತೀಯ ಸೇನಾಪಡೆಗಳು ಪಾಕಿಸ್ತಾನದಲ್ಲಿನ ವಾಯುನೆಲೆಗಳನ್ನು ಕೆಲವೇ ನಿಮಿಷಗಳಲ್ಲಿ ಧ್ವಂಸಗೊಳಿಸಿವೆ. ಇದು ನವ ಭಾರತದ ತಾಕತ್ತನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ಕರಕಟ್ ನಲ್ಲಿ ಶುಕ್ರವಾರ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದೆ,. ಇದೀಗ ಭಯೋತ್ಪಾದಕರ ಕೇಂದ್ರ ಕಚೇರಿ ಧೂಳಿಪಟ ಮಾಡಿ ರಾಜ್ಯದಲ್ಲಿ ನಿಂತಿರುವುದಾಗಿ ಹೇಳಿದರು.
"ಭಯೋತ್ಪಾದಕರು ಒಳನುಸುಳಲು ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನ ಸೇನೆಯನ್ನು ನಮ್ಮ ಪಡೆಗಳು ತೀವ್ರಗತಿಯಲ್ಲಿ ಮಂಡಿಯೂರುವಂತೆ ಮಾಡಿದವು. ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಲಾಯಿತು. ಇದು ನವ ಭಾರತ ಮತ್ತು ಇದು ನವ ಭಾರತದ ಶಕ್ತಿ ಎಂದು ಬಣ್ಣಿಸಿದರು.
ಪಹಲ್ಗಾಮ್ ದಾಳಿಯ ಎರಡು ದಿನಗಳ ನಂತರ ಬಿಹಾರಕ್ಕೆ ಬಂದಿದ್ದೆ. ಉಗ್ರರನ್ನು ಹುಡುಕಿ ಹೊಡೆಯುವುದಾಗಿ ಈ ನೆಲದಿಂದ ಭರವಸೆ ನೀಡಿದ್ದೆ. ಈ ಭರವಸೆಯನ್ನು ಈಡೇರಿಸುವುದೊಂದಿಗೆ ಈಗ ಮತ್ತೆ ಬಿಹಾರಕ್ಕೆ ಬಂದಿದ್ದೇನೆ. ಪಾಕಿಸ್ತಾನಕ್ಕೆ ಕುಳಿತುಕೊಂಡು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದ ಉಗ್ರರ ನೆಲೆಗಳನ್ನು ನಮ್ಮ ಸೇನೆ ನಾಶಮಾಡಿದೆ ಎಂದು ಹೇಳಿದರು.
ಆಪರೇಷನ್ ಸಿಂಧೂರ ತಾಕತ್ತಿಗೆ ಪಾಕಿಸ್ತಾನ ಮತ್ತು ಇಡೀ ವಿಶ್ವವೇ ಸಾಕ್ಷಿಯಾಗಿದೆ ಎಂದರು. ಮತ್ತೆ ಭಾರತದ ವಿರುದ್ಧ ಕಾಲು ಕೆರೆದು ದಾಳಿಯಂತಹ ಪ್ರಯತ್ನಕ್ಕೆ ಮುಂದಾದರೆ ಉಗ್ರರ ವಿರುದ್ಧ ಆಫರೇಷನ್ ಸಿಂಧೂರ್ ಮುಂದುವರೆಯಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
Advertisement