
ನವದೆಹಲಿ: ಯಾವುದೇ ದೇಶ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂದು ಕರೆಯುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಶುಕ್ರವಾರ ಹೇಳುವ ಮೂಲಕ ಕೇಂದ್ರದ ವಿದೇಶಾಂಗ ನೀತಿ ವಿರುದ್ಧ ಕಿಡಿಕಾರಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಾಗೂ ತದನಂತರ ವಿದೇಶಾಂಗ ನೀತಿಯ ಫಲಿತಾಂಶ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪವನ್ ಖೇರಾ, ನಮ್ಮ ವಿಫಲ ವಿದೇಶಾಂಗ ನೀತಿಯ ಫಲಿತಾಂಶವನ್ನು ಪಹಲ್ಗಮ್ ದಾಳಿ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆಯಲ್ಲಿ ನೋಡಿದ್ದೇವೆ. ನಮ್ಮ ವಿದೇಶಾಂಗ ನೀತಿಯ ಪರಿಣಾಮ ಯಾವುದೇ ದೇಶವು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಅಂತಾ ಕರೆಯಲಿಲ್ಲ ಎಂದರು.
ಆಪರೇಷನ್ ಸಿಂಧೂರ್ ಪ್ರಾರಂಭಿಸಿದಾಗ ಯಾವುದೇ ದೇಶವು ನಮ್ಮ ಪರವಾಗಿ ಹೇಳಿಕೆ ನೀಡಲಿಲ್ಲ ಎಂದು ಅವರು ತಿಳಿಸಿದರು.
ಪಾಕಿಸ್ತಾನದೊಂದಿಗೆ ರಷ್ಯಾ ಒಪ್ಪಂದ: ಇದೀಗ, ಆಪರೇಷನ್ ಸಿಂಧೂರ್ ನಂತರ, ಕುವೈತ್ ಪಾಕಿಸ್ತಾನದ ಮೇಲಿನ ವೀಸಾ ನಿರ್ಬಂಧಗಳನ್ನು ರದ್ದುಗೊಳಿಸಿದೆ. ಇರಾನ್, ಯುಎಇ ಮತ್ತು ಗಲ್ಫ್ ರಾಷ್ಟ್ರಗಳು ಪಾಕಿಸ್ತಾನದೊಂದಿಗೆ ಎಂಒಯುಗಳಿಗೆ ಸಹಿ ಹಾಕುತ್ತಿವೆ ಮತ್ತು ಅತ್ಯಂತ ಆಘಾತಕಾರಿ ವಿಷಯವೆಂದರೆ ನಿನ್ನೆ, ರಷ್ಯಾ ತನ್ನ ಹಳೆಯ ಉಕ್ಕಿನ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನದೊಂದಿಗೆ ಎಂಒಯುಗೆ ಸಹಿ ಹಾಕಿದೆ. ಈ ಒಪ್ಪಂದಡಿ ಪಾಕಿಸ್ತಾನವು ರಷ್ಯಾದಿಂದ $ 2.6 ಬಿಲಿಯನ್ ಪಡೆಯುತ್ತದೆ ಎಂದು ತಿಳಿಸಿದರು.
"ಇದು ನಮ್ಮ ವಿಫಲ ವಿದೇಶಾಂಗ ನೀತಿಯ ಫಲಿತಾಂಶವಾಗಿದೆ ಎಂದ ಪವನ್ ಖೇರಾ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರ ಟೀಕೆಗಳನ್ನು ನಿರಾಕರಿಸಿದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯ ಹೇಳಿಕೆ ಸಮರ್ಥಿಸಿಕೊಂಡು ಸರ್ಕಾರವನ್ನು ಪ್ರಶ್ನಿಸುವ ಕಾಂಗ್ರೆಸ್‌ನ ಹಕ್ಕನ್ನು ಪುನರುಚ್ಚರಿಸಿದರು.
Advertisement