
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೆಟರ್ 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಭೇಟಿಯಾದರು. ಈ ಯುವ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ತಮ್ಮ ಅಸಾಧಾರಣ ಪ್ರದರ್ಶನದಿಂದ ದೇಶದ ಗಮನ ಸೆಳೆದಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪ್ರಧಾನಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ಯುವ ಆಟಗಾರನನ್ನು ಶ್ಲಾಘಿಸಿದ್ದಾರೆ.
'ಪಾಟ್ನಾ ವಿಮಾನ ನಿಲ್ದಾಣದಲ್ಲಿ, ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಭೇಟಿಯಾದೆ. ಅವರ ಕ್ರಿಕೆಟ್ ಕೌಶಲ್ಯವನ್ನು ದೇಶಾದ್ಯಂತ ಪ್ರಶಂಸಿಸಲಾಗುತ್ತಿದೆ! ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು' ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ಆಡಿದ ಸೂರ್ಯವಂಶಿ, ಕೇವಲ ಏಳು ಪಂದ್ಯಗಳಲ್ಲಿ 252 ರನ್ ಗಳಿಸಿದ್ದಾರೆ. ಜೈಪುರದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ತಮ್ಮ ವಯಸ್ಸಿಗೆ ಮೀರಿದ ಪ್ರಬುದ್ಧತೆಯೊಂದಿಗೆ ಬ್ಯಾಟಿಂಗ್ ಮಾಡಿದ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿ, ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 35 ಎಸೆತಗಳಲ್ಲಿ ಬಂದ ಅವರ ಶತಕವು ಈಗ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕವಾಗಿದೆ.
Advertisement