
ಮುಂಬೈ: "ಪಹಲ್ಗಾಮ್ ದಾಳಿಯ ಆರು ಭಯೋತ್ಪಾದಕರನ್ನು ಹಿಡಿಯಲಾಗುತ್ತಿಲ್ಲ. ಬಹುಶಃ ಅವರು ಬಿಜೆಪಿ ಸೇರಬಹುದು ಮತ್ತು ಮುಂದೊಂದು ದಿನ ಆ ಆರು ಜನ ಬಿಜೆಪಿಗೆ ಸೇರಿದ್ದಾರೆ ಎಂದು ಬಿಜೆಪಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬರಬಹುದು" ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವತ್ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಇಂದು ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರು ಭಯೋತ್ಪಾದಕರನ್ನು ಬಂಧಿಸುವಲ್ಲಿನ ವಿಳಂಬವನ್ನು ಪ್ರಶ್ನಿಸಿದರು. ಈ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು.
"ಭಯೋತ್ಪಾದಕರು ಬಿಜೆಪಿಗೆ ಸೇರಿರಬಹುದು - ಅದಕ್ಕಾಗಿಯೇ ಅವರನ್ನು ಹಿಡಿಯಲಾಗುತ್ತಿಲ್ಲ. ಪಹಲ್ಗಾಮ್‌ನ ಆರು ಭಯೋತ್ಪಾದಕರನ್ನು ಬಂಧಿಸಲಾಗುತ್ತಿಲ್ಲ. ಬಹುಶಃ ಒಂದು ದಿನ ಆ ಆರು ಜನರು ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬರಬಹುದು. ಆದ್ದರಿಂದ, ಎಲ್ಲವನ್ನೂ ಮರೆತುಬಿಡಿ" ಎಂದು ರಾವತ್ ಹೇಳಿದ್ದಾರೆ.
"ಇದು ಸಂಪೂರ್ಣವಾಗಿ ಹಾಸ್ಯಾಸ್ಪದ ಹೇಳಿಕೆ ಮತ್ತು ಇದು ನಮ್ಮ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ" ಎಂದು ರಾವತ್ ಹೇಳಿಕೆಗೆ ಬಿಜೆಪಿ ನಾಯಕ ರಾಮ್ ಕದಮ್ ತಿರುಗೇಟು ನೀಡಿದ್ದಾರೆ.
"ಶಿವಸೇನೆ-ಯುಬಿಟಿ ನಾಯಕರಾದ ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಮತ್ತು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು" ಎಂದು ಕದಮ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
Advertisement