
ಡೆಹ್ರಾಡೂನ್: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ರಿಸಷ್ಪನಿಸ್ಟ್ ಅಂಕಿತಾ ಭಂಡಾರಿ ಕೊಲೆ ಕೇಸಿನಲ್ಲಿ ಬಿಜೆಪಿಯ ಮಾಜಿ ಸಚಿವನ ಪುತ್ರ ಸೇರಿದಂತೆ ಎಲ್ಲಾ ಮೂವರು ಆರೋಪಿಗಳಿಗೆ ಉತ್ತರಾಖಂಡ್ ನ ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ್ ಭಾಸ್ಕರ್ ಮತ್ತು ಅಂಕಿತ ಗುಪ್ತಾ ಅವರು ಐಪಿಸಿ ಸೆಕ್ಷನ್ 302 ( ಕೊಲೆ) 201 (ಸಾಕ್ಷ್ಯ ನಾಶ) 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 354 (ಮಹಿಳೆ ವಿರುದ್ಧ ಕ್ರಿಮಿನಲ್ ಶಕ್ತಿ ಬಳಕೆ) ಆರೋಪದಡಿ ದೋಷಿಗಳು ಎಂದು ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ರೀನಾ ನೆಗಿ ಅವರನ್ನೊಳಗೊಂಡ ನ್ಯಾಯಾಲಯ ತೀರ್ಪು ನೀಡಿತು.
ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಉತ್ತರಾಖಂಡ್ ನ ಬಿಜೆಪಿಯ ಮಾಜಿ ಸಚಿವರೊಬ್ಬರ ಪುತ್ರನಾಗಿದ್ದಾನೆ. ಎಲ್ಲಾ ಆರೋಪಿಗಳಿಗೆ ನ್ಯಾಯಾಲಯ ರೂ. 50,000 ದಂಡ ವಿಧಿಸಿದೆ. ರೂ. 4 ಲಕ್ಷವನ್ನು ಅಂಕಿತಾ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದೆ.
2022 ಸೆಪ್ಟೆಂಬರ್ 18 ರಂದು ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ವನಾಂತರ ರೆಸಾರ್ಟ್‌ನಲ್ಲಿ ರಿಸಷ್ಪನಿಸ್ಟ್ ಆಗಿದ್ದ ( receptionist) 19 ವರ್ಷದ ಭಂಡಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಆಕೆಯ ಮೃತದೇಹವನ್ನು ಚೀಲಾ ಶಕ್ತಿ ಕಾಲುವೆಗೆ ಎಸೆಯಲಾಗಿತ್ತು. ತದನಂತರ ಒಂದುವಾರದ ಬಳಿಕ ಮೃತದೇಹ ಪತ್ತೆಯಾಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಎಸ್ ಐಟಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ತೀವ್ರ ವಿಚಾರಣೆ ಬಳಿಕ ಪೊಲೀಸರು ಸುಮಾರು 97 ಸಾಕ್ಷ್ಯಗಳೊಂದಿಗೆ ಸುಮಾರು 500 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎರಡು ವರ್ಷ ಎಂಟು ತಿಂಗಳ ಕಾಲ ನಡೆದ ಕಠಿಣ ನ್ಯಾಯಾಂಗ ವಿಚಾರಣೆಯುದ್ದಕ್ಕೂ ಎಲ್ಲಾ ಮೂವರು ಆರೋಪಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
Advertisement