
ಕೋಲ್ಕತ್ತಾ: ಕೋಮುವಾದಿ ಹೇಳಿಕೆಗಳ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಹಾಗೂ ಪುಣೆಯ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಪುಣೆಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಶರ್ಮಿಷ್ಠಾ ಪನೋಲಿ ಅವರನ್ನು ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದೆ.
ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಬಾಲಿವುಡ್ ನಟರು ಆಪರೇಷನ್ ಸಿಂಧೂರ್ ಬಗ್ಗೆ ಮೌನವಾಗಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕೋಮುವಾದಿ ಹೇಳಿಕೆ ನೀಡಲಾಗಿದೆ. ಅದರಲ್ಲಿ ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಯಾವುದೇ ಆಧಾರವಿಲ್ಲದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ. ಶರ್ಮಿಷ್ಠಾ ಪನೋಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಈ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಈ ಸಂಬಂಧ ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ನಂತರ, ಕೋಲ್ಕತ್ತಾ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಶರ್ಮಿಷ್ಠಾ ಪನೋಲಿ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ವಿಡಿಯೋ ಒಂದು ನಿರ್ಧಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಪನೋಲಿಗೆ ಕಾನೂನು ನೋಟಿಸ್ ನೀಡಲು ಪದೇ ಪದೇ ಪ್ರಯತ್ನಿಸಲಾಯಿತು. ಆದರೆ ಆಕೆ ಮತ್ತು ಆಕೆಯ ಕುಟುಂಬ ತಲೆಮರೆಸಿಕೊಂಡಿದ್ದರು. ನಂತರ, ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತು. ಅದರ ಆಧಾರದ ಮೇಲೆ ಆಕೆಯನ್ನು ಗುರ್‌ಗ್ರಾಮದಿಂದ ಬಂಧಿಸಲಾಯಿತು ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಾದದ ನಂತರ, ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ತಮ್ಮ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. "ನಾನು ಹಾಕಿರುವ ವಿಷಯಗಳು ನನ್ನ ವೈಯಕ್ತಿಕ ಭಾವನೆಗಳು. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಒಂದು ವೇಳೆ ಯಾರಿಗಾದರೂ ನೋವಾಗಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ಸಹಕಾರ ಮತ್ತು ತಿಳುವಳಿಕೆಯನ್ನು ನಾನು ನಿರೀಕ್ಷಿಸುತ್ತೇನೆ. ಇನ್ನು ಮುಂದೆ, ನಾನು ಸಾರ್ವಜನಿಕವಾಗಿ ಪೋಸ್ಟ್ ಮಾಡುವಾಗ ಎಚ್ಚರಿಕೆಯಿಂದ ಇರುತ್ತೇನೆ. ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement