

ಹೈದರಾಬಾದ್: ಜೆಡ್ಡಾದಿಂದ ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಾನವ ಬಾಂಬ್ ಇದೆ ಎಂದು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆಯ ಇಮೇಲ್ ಬಂದಿದ್ದು, ತದನಂತರ ವಿಮಾನವನ್ನು ಮುಂಬೈಗೆ ತಿರುಗಿಸಿ ಅಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳಿಗ್ಗೆ 5.30 ರ ಸುಮಾರಿಗೆ ಬೆದರಿಕೆಯ ಇಮೇಲ್ ಬಂದಿದ್ದು, ಅದರಲ್ಲಿ ವಿಮಾನ ಹೈದರಾಬಾದಿನಲ್ಲಿ ಲ್ಯಾಂಡಿಂಗ್ ಆಗದಂತೆ ತಡೆಯಿರಿ ಎಂದು ಎಚ್ಚರಿಕೆ ನೀಡಲಾಗಿತ್ತು. ಎಲ್‌ಟಿಟಿಇ-ಐಎಸ್‌ಐ ಕಾರ್ಯಕರ್ತರು 1984ರ ಮದ್ರಾಸ್ ಏರ್‌ಪೋರ್ಟ್ ಬಾಂಬ್ ದಾಳಿ ರೀತಿಯಲ್ಲಿ ಸ್ಪೋಟಕ್ಕೆ ಯೋಜಿಸಲಾಗಿದೆ ಎಂದು ಇ-ಮೇಲ್ ನಲ್ಲಿ ಹೇಳಲಾಗಿತ್ತು.
ಇದರಿಂದಾಗಿ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದ್ದು, ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿತ್ತು. ಅಲ್ಲಿ ಅದು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಎಲ್ಲಾ ಭದ್ರತಾ ತಪಾಸಣೆ ನಡೆಸಲಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 1 ರಂದು ಜೆಡ್ಡಾದಿಂದ ಹೈದರಾಬಾದ್‌ಗೆ ಕಾರ್ಯಾಚರಿಸುತ್ತಿದ್ದ ಇಂಡಿಗೋ ವಿಮಾನ 6E68 ಗೆ ಭದ್ರತಾ ಬೆದರಿಕೆ ಬಂದಿದ್ದು, ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದೆ. ಗ್ರಾಹಕರಿಗೆ ಉಪಹಾರದ ವ್ಯವಸ್ಥೆ ಸೇರಿದಂತೆ ಯಾವುದೇ ಅನಾನೂಕೂಲವಾಗದಂತೆ ಪ್ರಯತ್ನ ಮಾಡಲಾಗಿದೆ ಎಂದು ಇಂಡಿಗೋ ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
Advertisement