

ನವದೆಹಲಿ: RSS ನಿಷೇಧಿಸಬೇಕು ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶನಿವಾರ ಪ್ರತಿಕ್ರಿಯಿಸಿದ್ದಾರೆ.
ಯಾರೋ ಬಯಸಿದ ಮಾತ್ರಕ್ಕೆ ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ, ಇಂತಹ ಬೇಡಿಕೆ ಇಡುವವರು ಹಿಂದಿನ ಅನುಭವದಿಂದ ಪಾಠ ಕಲಿಯಬೇಕು ಎಂದು ತಿರುಗೇಟು ನೀಡಿದ್ದಾರೆ.
ಜಬಲ್‌ಪುರದಲ್ಲಿ ಮೂರು ದಿನಗಳ ಆರ್ ಎಸ್ ಎಸ್ ನ ಅಖಿಲ ಭಾರತ ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂರು ಬಾರಿ ಇಂತಹ ಪ್ರಯತ್ನಗಳು ನಡೆದಿದ್ದವು, ಆಗ ಸಮಾಜ ಏನು ಹೇಳಿತು, ನ್ಯಾಯಾಲಯ ಏನು ಹೇಳಿತು? ಇಷ್ಟೆಲ್ಲ ಆದರೂ ಸಂಘದ ಕೆಲಸ ಬೆಳೆಯುತ್ತಲೇ ಹೋಯಿತು. ನಿಷೇಧ ಹೇರಲು ಸೂಕ್ತ ಕಾರಣಗಳಿರಬೇಕು ಎಂದರು.
ಯಾರೊ ಬಯಸಿದ ಮಾತ್ರಕ್ಕೆ ಅದು ಆಗುವುದಿಲ್ಲ. ಭಾರತದ ಏಕತೆ, ಭದ್ರತೆ ಮತ್ತು ಸಂಸ್ಕೃತಿಗಾಗಿ ಕೆಲಸ ಮಾಡುವ ಸಂಘಟನೆಯನ್ನು ನಿಷೇಧಿಸಬೇಕು ಎಂದು ನಾಯಕರೊಬ್ಬರು ಹೇಳಿದರೆ, ಅವರು ಕಾರಣವನ್ನು ಸಹ ತಿಳಿಸಬೇಕು" ಎಂದು ಹೊಸಬಾಳೆ ಹೇಳಿದರು.
ಸಮಾಜವು ಆರ್‌ಎಸ್‌ಎಸ್ ಅನ್ನು ಒಪ್ಪಿಕೊಂಡಿದೆ. ಸರ್ಕಾರಿ ವ್ಯವಸ್ಥೆ" ಕೂಡ ಅಂತಹ ನಿಷೇಧಗಳನ್ನು ತಪ್ಪು ಎಂದು ತೀರ್ಪು ನೀಡಿದೆ. ಈಗ ನಿಷೇಧಕ್ಕೆ ಒತ್ತಾಯಿಸುವವರು ಹಿಂದಿನ ಅನುಭವಗಳಿಂದ ಕಲಿಯಬೇಕು ಎಂದು ಆರ್ ಎಸ್ ಎಸ್ ಹಿರಿಯ ನಾಯಕ ಹೇಳಿದರು.
Advertisement