

ಕೋಟಾ: ರಾಜಸ್ಥಾನದ ಕೋಟಾದಿಂದ 80 ಕಿ.ಮೀ ದೂರದಲ್ಲಿರುವ ಇಟಾವಾ ಪಟ್ಟಣದ ಬಳಿ ಖಾಸಗಿ ಶಾಲಾ ವ್ಯಾನ್ ವೊಂದು ಶನಿವಾರ ಬೆಳಗ್ಗೆ ಎಸ್‌ಯುವಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಟಾ ಗ್ರಾಮದಿಂದ ಇಟಾವಾದ ಖಾಸಗಿ ಶಾಲೆಗೆ 10 ರಿಂದ 12 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್, ಬುಂಡಿ ಕಡೆಗೆ ಹೋಗುತ್ತಿದ್ದ ಎಸ್‌ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಇಟಾವಾ ಡಿಎಸ್‌ಪಿ ಶಿವಂ ಜೋಶಿ ಹೇಳಿದ್ದಾರೆ.
ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಎರಡೂ ವಾಹನಗಳು ಪಲ್ಟಿಯಾಗಿವೆ.
ಶಾಲಾ ವ್ಯಾನ್ ಟೈರ್ ಸ್ಫೋಟಗೊಂಡ ನಂತರ ನಿಯಂತ್ರಣ ಕಳೆದುಕೊಂಡು ಎಸ್ ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ಬಾಲಕಿಯರನ್ನು 10ನೇ ತರಗತಿಯ 15 ವರ್ಷದ ತನು ಧಕಾಡ್ ಮತ್ತು 4ನೇ ತರಗತಿಯ 8 ವರ್ಷದ ಪಾರುಲ್ ಆರ್ಯ ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಐದು ವಿದ್ಯಾರ್ಥಿಗಳನ್ನು ಕೋಟಾದ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾನ್ ಚಾಲಕ ಮತ್ತು ಎಸ್‌ಯುವಿಯಲ್ಲಿದ್ದ ಒಬ್ಬ ಪ್ರಯಾಣಿಕ ಕೂಡ ಗಾಯಗೊಂಡಿದ್ದು, ಅವರನ್ನು ಇಟಾವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಅಪಘಾತದ ನಂತರ ಎಸ್‌ಯುವಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
Advertisement