

ಪಾಟ್ನಾ: ಕೆಲವೇ ದಿನಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಪಕ್ಷದಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಅನಂತ್ ಸಿಂಗ್ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಜನ ಸುರಾಜ್ ಬೆಂಬಲಿಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಜೆಡಿ(ಯು)ನಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಅನಂತ್ ಸಿಂಗ್ ಅವರನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆ ಸಂಬಂಧ ಹೊಂದಿದ್ದ ಗ್ಯಾಂಗ್‌ಸ್ಟರ್ ಯಾದವ್, ಗುರುವಾರ ಮೊಕಾಮಾದಲ್ಲಿ ತಮ್ಮ ಸೋದರಳಿಯ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದಾಗ ಹತ್ಯೆಗೀಡಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದಿಂದ ಪಿಯೂಷ್ ಸ್ಪರ್ಧಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಮೃತನ ಮೊಮ್ಮಗ ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳ ಪೈಕಿ ಒಂದರಲ್ಲಿ ಅನಂತ್ ಸಿಂಗ್ ಸೇರಿದಂತೆ ಇತರ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ನಂತರ 2022 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ನಂತರ ಅನರ್ಹಗೊಳಿಸಲಾಯಿತು. ನಂತರ ಅವರ ಪತ್ನಿ ನೀಲಂ ದೇವಿ ಉಪಚುನಾವಣೆಯಲ್ಲಿ ಗೆದ್ದರು.
Advertisement