

ಪಾಟ್ನಾ: ಬಿಹಾರದಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಸ್ವಲ್ಪ ಸಮಯವನ್ನು ಮೀನು ಹಿಡಿಯಲು ಮೀಸಲಿಟ್ಟರು. ಚುನಾವಣಾ ರ‍್ಯಾಲಿಯೊಂದರ ನಂತರ ಬೇಗುಸರಾಯ್ ಜಿಲ್ಲೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ಮೀನು ಹಿಡಿದರು.
ವಿಕಾಸ ಶೀಲ್ ಇನ್ಸಾನ್ ಪಾರ್ಟಿಯ ಮುಖೇಶ್ ಸಾಹ್ನಿ ಅವರ ಜೊತೆಯಲ್ಲಿ ದೋಣಿಯೊಂದರಿಂದ ಜಿಗಿದ ರಾಹುಲ್ ಗಾಂಧಿ ಕೆರೆಯ ಮಧ್ಯ ಭಾಗಕ್ಕೆ ತೆರಳಿದರು.
ಬನಿಯನ್ ಹಾಗೂ ಅಂಡರ್ ಪ್ಯಾಂಟ್ ನಲ್ಲಿದ್ದ ಮುಖೇಶ್ ಸಾಹ್ನಿ ಬಲೆ ಬೀಸಿ, ಮೀನು ಹಿಡಿಯುವುದರೊಂದಿಗೆ ತನ್ನ ಸಂಪ್ರದಾಯಿಕ ಮೀನುಗಾರಿಕೆ ಕಲೆಯನ್ನು ರಾಹುಲ್ ಗಾಂಧಿಗೆ ತೋರಿಸಿದರು. ಮಾಜಿ ಬಾಲಿವುಡ್ ಸೆಟ್ ಡಿಸೈನರ್ ಆಗಿರುವ ಮುಖೇಶ್ ಸಾಹ್ನಿ ಮೀನುಗಾರಿಕೆ ಕಾಯಕದ ಸಮುದಾಯಕ್ಕೆ ಸೇರಿದ್ದಾರೆ.
ತನ್ನ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ಗಳನ್ನು ಧರಿಸಿದ್ದ 'ರಾಹುಲ್ ಗಾಂಧಿ, ಸಾಹ್ನಿಯನ್ನು ಹಿಂಬಾಲಿಸಿದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಾರರು ಕೂಡ ಇದ್ದರು. ಘಟನೆಯ ವೀಡಿಯೊ ಕ್ಲಿಪ್ ಅನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದೇ ವೇಳೆ ರಾಹುಲ್ ಗಾಂಧಿ, ಮೀನುಗಾರರ ಸವಾಲುಗಳು ಹಾಗೂ ಹೋರಾಟಗಳ ಕುರಿತು ಚರ್ಚಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ. ಮೀನುಗಾರರಿಗೆ ವಿಮಾ ಯೋಜನೆ ಮತ್ತು ಮೀನುಗಾರಿಕೆಯನ್ನು ನಿಷೇಧದ 'ಮೂರು ತಿಂಗಳ ಅವಧಿಗೆ' ಮೀನುಗಾರರ ಕುಟುಂಬಕ್ಕೆ ರೂ. 5,000 ಆರ್ಥಿಕ ನೆರವಿನಂತಹ ಇಂಡಿಯಾ ಒಕ್ಕೂಟದ ಭರವಸೆಗಳನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.
Advertisement