

ಪಾಟ್ನಾ: ಕೂಸು ಹುಟ್ಟವ ಮುನ್ನವೇ ಕುಲಾವಿ ಎಂಬಂತೆ ಬಿಹಾರದಲ್ಲಿ ಇನ್ನೂ ಚುನಾವಣೆ ನಡೆದಿಲ್ಲ. ಆದರೂ ನವೆಂಬರ್ 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಅಂತಾ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಇಂಡಿಯಾ ಬಣ ಸರ್ಕಾರ ರಚಿಸುವುದು ಖಚಿತ. ನವೆಂಬರ್ 14 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಇದಾದ ನಾಲ್ಕು ದಿನಗಳ ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದರು.
ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮೊಕಾಮ ಮಾಜಿ ಶಾಸಕ ಅನಂತ್ ಸಿಂಗ್ ಬಂಧನ ಕುರಿತು ಪ್ರತಿಕ್ರಿಯಿಸುವಾಗ ಈ ರೀತಿಯ ಹೇಳಿಕೆ ನೀಡಿದ ತೇಜಸ್ವಿ ಯಾದವ್, ಇಂತಹ ಗಂಭೀರ ಘಟನೆ ನಡೆಯುವುದು ನಿಶ್ಚಿತವಾಗಿತ್ತು. ಬಿಹಾರಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಾಗುತ್ತಿರುವ ಇಂತಹ ಅಪರಾಧ ಪ್ರಕರಣಗಳ ಕಡೆಗೆ ಗಮನ ಹರಿಸಬೇಕು. ಆದರೆ ಮಹಾಘಟಬಂಧನ್ ಸರ್ಕಾರ ರಚನೆಯಾದ ತಕ್ಷಣ ಇದು ಬದಲಾಗುತ್ತದೆ ಎಂದು ಹೇಳಿದರು.
"ನವೆಂಬರ್ 14 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತದೆ. ನಂತರ ನವೆಂಬರ್ 18 ರಂದು ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ನವೆಂಬರ್ 26 ಮತ್ತು ಜನವರಿ 26 ರ ನಡುವೆ ಒಂದು ತಿಂಗಳು ಕರ್ಮದ ಅವಧಿಯಾಗಿರುತ್ತದೆ. ಯಾವುದೇ ಜಾತಿ, ಧರ್ಮ ಎನ್ನದೇ ಎಲ್ಲಾ ಕ್ರಿಮಿನಲ್ ಗಳನ್ನು ಜೈಲಿಗೆ ಕಳುಹಿಸಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮತ್ತೊಂದೆಡೆ ತೇಜಸ್ವಿ ಯಾದವ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ, ವಿದೇಶದಲ್ಲಿ ವಿಹಾರಕ್ಕೆ ಟಿಕೆಟ್ ಖರೀದಿಸಿದ್ದಾರೆ ಅಂತಾ ತಿಳಿದುಬಂದಿದೆ. ಬಿಹಾರದ ಜನರು ಇನ್ನೂ ನಿತೀಶ್ ಕುಮಾರ್ ಅವರ ಮೇಲೆ ತಮ್ಮ ನಂಬಿಕೆ ಉಳಿಸಿಕೊಂಡಿದ್ದಾರೆ. ಇದು ನಿಜವಾಗಿದ್ದರೆ, ಅವರು ತಮ್ಮ ಪ್ರವಾಸವನ್ನು ಮೊದಲೇ ಯೋಜಿಸಿ ಸ್ವಲ್ಪ ವಿಶ್ರಾಂತಿ ಪಡೆಯಲಿ ಎಂದು ಹೇಳಿದರು.
Advertisement