

ಜೈಪುರ: ರಾಜಸ್ಥಾನದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಡಂಪರ್ 17 ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಅದರ ಟ್ರಾಲಿ ಉರುಳಿಬಿದ್ದು ಮೂರು ಕಾರುಗಳು ಜಖಂಗೊಂಡಿವೆ. ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದು, ಇತರ 18 ಮಂದಿ ಗಾಯಗೊಂಡಿದ್ದಾರೆ.
ಲೋಹಾ ಮಂಡಿ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದೆ.ಲೋಹಾ ಮಂಡಿ ಪ್ರದೇಶದ ಪೆಟ್ರೋಲ್ ಪಂಪ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ತೆರಳುತ್ತಿದ್ದ ಡಂಪರ್ ಬ್ರೇಕ್ ವೈಫಲ್ಯಕ್ಕೊಳಗಾಗಿದ್ದು, ರಸ್ತೆ ಬದಿ ನಿಂತಿದ್ದ ಕಾರು, ಆಟೋ ರಿಕ್ಷಾ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಮೃತರಲ್ಲಿ ಒಂದು ಮಗು ಸೇರಿದೆ ಎಂದು ಕವಾಂಟಿಯಾ ಆಸ್ಪತ್ರೆಯ ಅಧೀಕ್ಷಕ ಡಾ. ಆರ್.ಎಸ್. ತನ್ವರ್ ದೃಢಪಡಿಸಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು SMS ಟ್ರಾಮಾ ಸೆಂಟರ್ ಮತ್ತು ಕವಾಂಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಗಾಯಾಳುಗಳ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಜೈಪುರ ಪೊಲೀಸ್ ಆಯುಕ್ತ ಸಚಿನ್ ಮಿತ್ತಲ್ ತಿಳಿಸಿದ್ದಾರೆ.
ಲೋಹಾ ಮಂಡಿ ಬಳಿ ಅಪಘಾತ ಸಂಭವಿಸಿದ್ದು, ಡಂಪರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು 13 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಜೈಪುರ ಜಿಲ್ಲಾ ಕಲೆಕ್ಟರ್ ಜಿತೇಂದ್ರ ಸೋನಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಮಾನವೀಯ ಆಧಾರದ ಮೇಲೆ ಸಾಧ್ಯವಾದ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದೇವೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ರಾಜಸ್ಥಾನ ಸಚಿವ ಸುಮಿತ್ ಗೋದಾರ ಹೇಳಿದರು.
ಈ ಮಧ್ಯೆ ಜೈಪುರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ದೃಢಪಡಿಸಿದ್ದಾರೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 6 ಮಂದಿ ಸ್ಥಿತಿ ಗಂಭೀರವಾಗಿದೆ. ಅವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದರು.
"ಗಾಯಾಳುಗಳನ್ನು ಹಸಿರು ಕಾರಿಡಾರ್ ಮೂಲಕ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ (SMS) ಕರೆತರಲಾಗಿದೆ ಎಂದು ಜೈಪುರಐಜಿ ರಾಹುಲ್ ಪ್ರಕಾಶ್ ಹೇಳಿದರು.
Advertisement