ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸಾಲದ ಹೊರೆ! ಆದರೆ, ಇನ್ನೂ ಅಪಾಯದ ಗಂಟೆ ಮೊಳಗಿಲ್ಲ ಏಕೆ? ಇಲ್ಲಿದೆ ಮಾಹಿತಿ...

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಲವನ್ನು ಹೊಂದಿವೆ. ಆದರೆ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಕೂಡಾ ದೇಶದ ಗೃಹ ಸಾಲದಲ್ಲಿ ಆಂಧ್ರ ಮತ್ತು ತೆಲಂಗಾಣಕ್ಕಿಂತ ಸ್ವಲ್ಪ ಹಿಂದೆ ಇವೆ.
Casual Images
ಸಾಂದರ್ಭಿಕ ಚಿತ್ರ
Updated on

ಸಾಲ ಮಾರಕವಲ್ಲ. ಆದರೆ ಅದು ಅತಿಯಾದ್ರೆ ವಿಷ! ದಕ್ಷಿಣ ಭಾರತದವರನ್ನು ಕೇಳಿದ್ರೆ ಇದು ಗೊತ್ತಾಗುತ್ತದೆ. ಇಲ್ಲಿನ ವ್ಯಕ್ತಿಗಳು ಮತ್ತು ಕುಟುಂಬಗಳು ದೇಶದಲ್ಲಿಯೇ ಅತಿ ಹೆಚ್ಚಿನ ಸಾಲಗಾರರು. ಕುತೂಹಲಕಾರಿ ಸಂಗತಿಯೆಂದರೆ, ಒಂದು ದಶಕದ ಅವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದರಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಲವನ್ನು ಹೊಂದಿವೆ. ಆದರೆ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಕೂಡಾ ದೇಶದ ಗೃಹ ಸಾಲದಲ್ಲಿ ಆಂಧ್ರ ಮತ್ತು ತೆಲಂಗಾಣಕ್ಕಿಂತ ಸ್ವಲ್ಪ ಹಿಂದೆ ಇವೆ.

ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ದ್ವೈವಾರ್ಷಿಕ ಜರ್ನಲ್ ಸಮೀಕ್ಷೆ ಪ್ರಕಾರ, 2021 ರಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರತಿ ಐದು ವಯಸ್ಕರಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಸಾಲಗಾರರಾಗಿದ್ದರು. ಇದು ಭಾರತದಲ್ಲಿ ಅತಿ ಹೆಚ್ಚಾಗಿದೆ. ತೆಲಂಗಾಣ ಶೇ. 37.2 ರೊಂದಿಗೆ ನಂತರದ ಸ್ಥಾನದಲ್ಲಿದೆ. ಕೇರಳ ಶೇ. 29. 9, ತಮಿಳುನಾಡು ಶೇ. 29.4, ಪುದುಚೇರಿ ಶೇ. 28.3 ಮತ್ತು ಕರ್ನಾಟಕದಲ್ಲಿ ಶೇ. 23. 2 ರಷ್ಟಿದೆ. ಇದಕ್ಕೆ ವಿರುದ್ಧವಾಗಿ ದೆಹಲಿ ಶೇ. 3.4, ಛತ್ತೀಸ್‌ಗಢ ಶೇ. 6.5, ಅಸ್ಸಾಂ ಶೇ.7.1 ಗುಜರಾತ್ ಶೇ.7.2 ,ಜಾರ್ಖಂಡ್ ಶೇ. 7.5, ಪಶ್ಚಿಮ ಬಂಗಾಳ ಶೇ. 8.5 ಮತ್ತು ಹರಿಯಾಣ ಶೇ. 8.9 ರೊಂದಿಗೆ ಕಡಿಮೆ ಸಾಲ ಹೊಂದಿರುವ ರಾಜ್ಯಗಳಾಗಿವೆ.

ಕುತೂಹಲಕಾರಿ ಸಂಗತಿವೇನೆಂದರೆ, ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ ಹಳೆಯ ದತ್ತಾಂಶಗಳು ಹೇಳುವಂತೆ 2013-2019ರ ಅವಧಿಯಲ್ಲಿಯೂ ದಕ್ಷಿಣ ರಾಜ್ಯಗಳು ಸಾಲದ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಆರ್‌ಬಿಐನ ಇತ್ತೀಚಿನ ಹಣಕಾಸು ಸ್ಥಿರತೆ ವರದಿ ಹೇಳಿದಂತೆ, ದಕ್ಷಿಣದ ಐದು ರಾಜ್ಯಗಳು ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಲ-ಆಸ್ತಿ ಅನುಪಾತವನ್ನು ಹೊಂದಿವೆ.

ಸಾಲ ಹೆಚ್ಚಿದ್ದರೂ ಅಪಾಯದ ಗಂಟೆ ಸದ್ದಿಲ್ಲ ಏಕೆ:

ಕ್ರೆಡಿಟ್-ಕಾರ್ಡ್ ಸಾಲಗಳು, ವೈಯಕ್ತಿಕ ಸಾಲಗಳು, ಆಟೋ ಸಾಲಗಳು ಮತ್ತು ಚಿನ್ನದ ಸಾಲಗಳಂತಹ ಅಸುರಕ್ಷಿತ ಚಿಲ್ಲರೆ ಸಾಲಗಳೇ ಹೆಚ್ಚಾಗಿವೆ. ಸಾಲದ ರಾಶಿಯು ಹೆಚ್ಚಾಗುತ್ತಿರುವಂತೆ ತೋರುತ್ತದೆ. ಆದರೆ ಅದು ಇನ್ನೂ ಅಪಾಯದ ಗಂಟೆ ಸದ್ದು ಮಾಡುತ್ತಿಲ್ಲ. ಬದಲಾಗಿ ಇದು ಹೆಚ್ಚಿನ ಆದಾಯ, ಬ್ಯಾಂಕಿಂಗ್ ಸಾಲಕ್ಕೆ ಮತ್ತಷ್ಟು ಅವಕಾಶ ಮತ್ತು ದೇಶದ ಉಳಿದ ಭಾಗಗಳಿಗಿಂತ ತುಲನಾತ್ಮಕವಾಗಿ ಉತ್ತಮ ಕ್ರೆಡಿಟ್-ಟು-ಡಿಪಾಸಿಟ್ ಅನುಪಾತದ ಸಂಕೇತವೆಂದು ನೋಡಲಾಗುತ್ತಿದೆ.

ಇದರಲ್ಲಿ ಕರ್ನಾಟಕ ಮುಂಚೂಣಿ!

ವಾಸ್ತವವಾಗಿ MoSPI ದತ್ತಾಂಶವು ದಕ್ಷಿಣ ರಾಜ್ಯಗಳಲ್ಲಿ ಆರ್ಥಿಕ ಸೇರ್ಪಡೆ ಮಟ್ಟವು ಅತ್ಯಧಿಕವಾಗಿದೆ ಎಂದು ತೋರಿಸುತ್ತದೆ. ಕರ್ನಾಟಕವು ಶೇ. 95.9ರೊಂದಿಗೆ ಮುಂಚೂಣಿಯಲ್ಲಿದೆ. ಆಂಧ್ರಪ್ರದೇಶ ಶೇ. 92.3, ತಮಿಳುನಾಡು ಶೇ. 92, ಛತ್ತೀಸ್‌ಗಢ ಶೇ. 91.1 ಮತ್ತು ಕೇರಳ ಶೇ. 91 ರಷ್ಟಿದೆ. ಆರ್ಥಿಕ ಸೇರ್ಪಡೆ ಅಂದ್ರೆ, ಕೆಲಸ ಮಾಡುವ ಎಲ್ಲ ವಯಸ್ಕರಿಗೂ ಸಾಲ ಸಿಗುವುದು, ಉಳಿತಾಯ, ಪಾವತಿ ಮತ್ತು ಸೇವಾ ಪೂರೈಕೆದಾರರಿಂದ ವಿಮೆ ಯಂತಹ ಸೌಲಭ್ಯಗಳು ಸುಲಭವವಾಗಿ, ಕೈಗೆಟುಕುವ ದರದಲ್ಲಿ ಸಿಗುತ್ತದೆ ಎಂಬರ್ಥವಿದೆ.

ಇದರರ್ಥ ದಕ್ಷಿಣ ರಾಜ್ಯಗಳಲ್ಲಿನ ಕುಟುಂಬಗಳು ಹೆಚ್ಚಿನ ತಲಾ ಆದಾಯ, ಹೆಚ್ಚಿನ ಆಸ್ತಿಗಳನ್ನು ಹೊಂದಿವೆ. ಜೊತೆಗೆ ಹೆಚ್ಚಿನ ಆರ್ಥಿಕ ಸೇರ್ಪಡೆಯನ್ನೂ ಹೊಂದಿವೆ. ಅವರ ಕ್ರೆಡಿಟ್-ಟು-ಡಿಪಾಸಿಟ್ ಅನುಪಾತ ದೇಶದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ. ಇದು ಸಾಲದಾತರು ಹೆಚ್ಚು ಸಾಲ ನೀಡಲು ಪ್ರೋತ್ಸಾಹಿಸುತ್ತದೆ.

ಈ ಮಧ್ಯೆ ರಾಷ್ಟ್ರೀಯ ಮಟ್ಟದಲ್ಲಿ 2021 ರಲ್ಲಿ ಸುಮಾರು ಶೇ.15 ರಷ್ಟು ವಯಸ್ಕರು ಬಾಕಿ ಸಾಲಗಳನ್ನು ಹೊಂದಿದ್ದರು. ಸಮೀಕ್ಷೆಯ ಸಮಯದಲ್ಲಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಸಹಕಾರ ಅಥವಾ ಇನ್ನಿತರ ಸಾಲ ನೀಡುವ ಸಂಸ್ಥೆಗಳಿಗ ರೂ.500 ನಷ್ಟು ಸಾಲ ಹೊಂದಿರುವುದು ಕಂಡುಬಂದಿದೆ. ಇದು ಸಾಲ ಮತ್ತು ಆರ್ಥಿಕ ಸ್ಥಿತಿ, ಸಾಲ ಮತ್ತು ಮನೆಯ ಗಾತ್ರದ ನಡುವಿನ ನೇರ ಸಂಬಂಧವನ್ನು ತೋರಿಸುತ್ತದೆ.

ಉದಾಹರಣೆಗೆ, ಸಣ್ಣ ಕುಟುಂಬಗಳು ಹೆಚ್ಚು ಸಾಲವನ್ನು ತೆಗೆದುಕೊಳ್ಳುತ್ತವೆ. ಹೆಚ್ಚಿನ ಆದಾಯದ ಕುಟುಂಬಗಳ ವಿವಾಹಿತ ಪುರುಷರು ಸಹ ಹೆಚ್ಚಿನ ಸಾಲವನ್ನು ಹೊಂದಿರುತ್ತಾರೆ. ಮೊದಲ ತ್ರೈಮಾಸಿಕದಲ್ಲಿ ಕುಟುಂಬಗಳ ಸಾಲದ ಪ್ರಮಾಣ ಶೇ.9.3 ರಷ್ಟಿದದ್ದು, 4 ನೇ ತ್ರೈಮಾಸಿಕ ಅವಧಿಯಲ್ಲಿ ಶೇ.18 ರಷ್ಟು ದ್ವಿಗುಣವಾಗಿತ್ತು.

ಈ ವರ್ಗದವರೇ ಹೆಚ್ಚಿನ ಸಾಲಗಾರರು:

ಅದೇ ರೀತಿ, ಸ್ವ ಉದ್ಯೋಗಿಗಳು, ಸಂಬಳ ಪಡೆಯುವ ಕಾರ್ಮಿಕರು ಮತ್ತು ಸಾಂದರ್ಭಿಕ ಕಾರ್ಮಿಕರು ಸಹ ಕ್ರಮವಾಗಿ ಶೇ. 32, ಶೇ. 22.8, ಶೇ. 22.5 ರಷ್ಟು ಹೆಚ್ಚು ಸಾಲಗಾರರಾಗಿದ್ದರೆ, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಮತ್ತು ಅಂಗವಿಕಲರು ಕಡಿಮೆ ಸಾಲ ಪಡೆಯುತ್ತಾರೆ. ಮತ್ತೊಂದೆಡೆ, ಮಹಿಳೆಯರು, ಅವಿಭಕ್ತ ಕುಟುಂಬಗಳು, ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಕಡಿಮೆ ಸಾಲ ಪಡೆದವರಾಗಿದ್ದಾರೆ.

ಸಾಲದ ಪ್ರಮಾಣ OBC ಗಳಲ್ಲಿ ಅತಿ ಹೆಚ್ಚು ಶೇ. 16.6 ರಷ್ಟಿದ್ದರೆ ST ಗಳಲ್ಲಿ ಅತಿ ಕಡಿಮೆ ಶೇ. 11 ರಷ್ಟಿತ್ತು. ಇತರ ಧಾರ್ಮಿಕ ಗುಂಪುಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. 15 ರಿಂದ 29 ವರ್ಷ ವಯಸ್ಸಿನವರಲ್ಲಿ ಸಾಲವು ಕಡಿಮೆ ಮಟ್ಟದಲ್ಲಿತ್ತು. ಆದರೆ 30-44 ವರ್ಷಗಳು ಮತ್ತು 45-59 ವರ್ಷ ವಯಸ್ಸಿನ ಮಧ್ಯಮ ವಯಸ್ಸಿನ ಗುಂಪಿನಲ್ಲಿ ಗಣನೀಯವಾಗಿ ಹೆಚ್ಚಾಗಿದೆ. SC ಜನರಲ್ಲಿ ಸಾಲವು ಶೇ. 55 ರಷ್ಟು ಹೆಚ್ಚಾಗಿದ್ದರೆ ಮತ್ತು OBC ಗಳಲ್ಲಿ ಶೇ.74 ರಷ್ಟಿದೆ. ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಸಾಲದ ಸಾಧ್ಯತೆ ಶೇ. 12 ರಷ್ಟು ಕಡಿಮೆಯಿದೆ. ಇತರ ಧರ್ಮಗಳಲ್ಲಿ ಶೇ. 15 ರಷ್ಟಿದೆ.

ಕರ್ನಾಟಕದ ಶೇ. 95.9 ರಷ್ಟು ಪ್ರಗತಿ

ಈ ಮಧ್ಯೆ ಸಾಮಾಜಿಕ-ಆರ್ಥಿಕ-ಜನಸಂಖ್ಯಾ ಗುಂಪುಗಳಲ್ಲಿ ಆರ್ಥಿಕ ಸೇರ್ಪಡೆಯ ವ್ಯಾಪ್ತಿಯಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ ವ್ಯತ್ಯಾಸಗಳನ್ನು ಅಧ್ಯಯನ ತೋರಿಸುತ್ತದೆ. ರಾಷ್ಟ್ರೀಯ ವಯಸ್ಕ ಜನಸಂಖ್ಯೆಯ ಶೇ.87 ಕ್ಕಿಂತ ಹೆಚ್ಚು ಜನರು ಆರ್ಥಿಕವಾಗಿ ಸೇರಿಸಲ್ಪಟ್ಟಿದ್ದರೂ, ಕರ್ನಾಟಕದ ಪ್ರಗತಿ ಶೇ. 95.9 ರಷ್ಟಿದ್ದರೆ ಮೇಘಾಲಯದಲ್ಲಿ ಶೇ. 65. 5 ರಷ್ಟಿದೆ.

ಹಣಕಾಸು,, ಆರ್ಥಿಕ ಚಟುವಟಿಕೆಯ ಪ್ರಮುಖ ಚಾಲಕ. ವ್ಯಕ್ತಿಗಳು ಮತ್ತು ವ್ಯವಹಾರಗಳು, ವಿಶೇಷವಾಗಿ ಸೇವೆ ಸಲ್ಲಿಸದ ಅಥವಾ ಹೊರಗಿಡಲ್ಪಟ್ಟವರು, ಉಳಿತಾಯ, ಕ್ರೆಡಿಟ್, ವಿಮೆ ಮತ್ತು ಪಾವತಿ ವ್ಯವಸ್ಥೆಗಳಂತಹ ಕೈಗೆಟುಕುವ, ಹಣಕಾಸು ಸೇವೆಗಳನ್ನು ಪಡೆಯಬಹುದಾದ ಮತ್ತು ಬಳಸಬಹುದಾದ ರಾಜ್ಯ ಎಂದು ವಿಶ್ವಸಂಸ್ಥೆ ಆರ್ಥಿಕ ಸೇರ್ಪಡೆಯನ್ನು ವ್ಯಾಖ್ಯಾನಿಸುತ್ತದೆ.

Casual Images
ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ: ಸಿ.ಟಿ ರವಿ ವ್ಯಂಗ್ಯ

2020-21ರಲ್ಲಿ ಅಖಿಲ ಭಾರತ ಮಟ್ಟದಲ್ಲಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ. 87.2 ರಷ್ಟು ಯುವಕರು ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ಮೊಬೈಲ್-ಹಣ ಸೇವಾ ಪೂರೈಕೆದಾರರಲ್ಲಿ ಖಾತೆಯನ್ನು ಹೊಂದಿದ್ದರು. ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ. 97.5 ರೊಂದಿಗೆ ಸಾರ್ವತ್ರಿಕ ಹಣಕಾಸು ಸೇರ್ಪಡೆಗೆ ಹತ್ತಿರದಲ್ಲಿದೆ. ನಂತರ ದಾದ್ರಾ ನಗರ ಹವೇಲಿ ಶೇ. 96.35, ಗೋವಾ ಶೇ. 95.8, ಹಿಮಾಚಲ ಪ್ರದೇಶ ಶೇ.95.6 ಮತ್ತು ಪುದುಚೇರಿಯಲ್ಲಿ ಶೇ.95.4 ರಷ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com