ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ: ಸಿ.ಟಿ ರವಿ ವ್ಯಂಗ್ಯ
ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ಅವರು ಬುಧವಾರ ವ್ಯಂಗ್ಯವಾಡಿದರು.
ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡಿಸಬೇಕು, ರಾಜಕೀಯ ಅಭಿವೃದ್ಧಿಗಾಗಿ ಅಲ್ಲ ಎಂದು ಹೇಳಿದರು.
ಸರ್ಕಾರಗಳು ಮತದಾರರ ಓಲೈಕೆಗಾಗಿ ಸಾಲ ತೆಗೆದುಕೊಳ್ಳುವುದನ್ನು ಮುಂದುವರಿಸಿದರೆ ಮತ್ತು ಯಾವುದೇ ಆಸ್ತಿಗಳನ್ನು ಸೃಷ್ಟಿಸದಿದ್ದರೆ ಭವಿಷ್ಯದ ಪೀಳಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ, ಎಲ್ಲ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನಮ್ಮ ಸರ್ಕಾರ ನೀಡಿದ್ದಕ್ಕಿಂತ ಕಡಿಮೆ ಅನುದಾನವನ್ನು ನೀಡಿದ್ದಾರೆ. ಆದರೆ ಮುಸ್ಲಿಮರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಗುತ್ತಿಗೆಯಲ್ಲೂ ಮುಸ್ಲಿಮರಿಗೆ ಮೀಸಲಾತಿ ನೀಡಲಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಭಕ್ಷೀಸು ನೀಡಿದೆ. ಇದು ಹಲಾಲ್ ಬಜೆಟ್.
2025–26ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ರೂ.7 ಲಕ್ಷ ಕೋಟಿ ದಾಟಲಿದ್ದು, ಅದರಲ್ಲಿ ರೂ.4 ಲಕ್ಷ ಕೋಟಿಗೂ ಹೆಚ್ಚು ಸಾಲ ಸಿದ್ದರಾಮಯ್ಯ ಅವರೇ ಮಾಡಿದ್ದಾರೆ. 16 ಬಾರಿ ಬಜೆಟ್ ಮಂಡಿಸಿದ ದಾಖಲೆ ಜತೆಗೆ, ಅತಿಹೆಚ್ಚು ಸಾಲ ಮಾಡಿದ ದಾಖಲೆಯೂ ಅವರಿಗೇ ಸಲ್ಲುತ್ತದೆ ಎಂದು ಹೇಳಿದರು.
ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ: ಭೋಜೇಗೌಡ
ಈ ನಡುವೆ ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವಂತೆ ಎಸ್ ಎಲ್ ಭೋಜೇಗೌಡ ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ 4.9 ಲಕ್ಷ ಕೋಟಿ ರೂ. ಬಜೆಟ್ ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವತ್ತ ಏಕೆ ಗಮನಹರಿಸಿಲ್ಲ ಎಂದು ಪ್ರಶ್ನಿಸಿದರು.
ಖಾಸಗಿ ಶಾಲೆಗಳಂತೆಯೇ ಗುಣಮಟ್ಟದ ಶಿಕ್ಷಣವನ್ನು ನೀಡುವ ಸರ್ಕಾರಿ ಶಾಲೆಗಳನ್ನು ನಾವು ಅಭಿವೃದ್ಧಿಪಡಿಸಬೇಕು. ಇದು ಯಾವಾಗ ಆಗುತ್ತದೆ? ಎಲ್ಲಾ ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಮಾತ್ರ ಸೇರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ