
ಬೆಂಗಳೂರು: ಸಿಎಂ ಬದಲಾವಣೆ ಕುರಿತು ರಾಜ್ಯ್ ಕಾಂಗ್ರೆಸ್ ಚರ್ಚೆ ನಡೆಯುತ್ತಿರುವ ನಡುವಲ್ಲೇ ಮುಂದಿನ ವರ್ಷವೂ ಬಜೆಟ್ ಮಂಡಿಸುವುದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದು, ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲ ಮೂಡಿಸಿದೆ.
ಕೆಳಮನೆಯಲ್ಲಿ ಇತ್ತೀಚೆಗೆ 5 ವರ್ಷಕ್ಕೂ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು, ಇದೀಗ ಪರಿಷತ್ತಿನಲ್ಲೂ ಮುಂದಿನ ವರ್ಷ ಬಜೆಟ್ ಮಂಜಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ರಾಜ್ಯದ ಸಾಲದ ಕುರಿತು ಆರೋಪ-ಪ್ರತ್ಯಾರೋಪ ನಡೆಯಿತು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, 4.09 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ 3.11 ಲಕ್ಷ ಕೋಟಿ ರೂ. ರಾಜಸ್ವ ವೆಚ್ಚವನ್ನು ನಿಗದಿ ಮಾಡಲಾಗಿದೆ. ಇದು ಶೇ.76 ರಷ್ಟಿದ್ದರೆ ಬಂಡವಾಳ ವೆಚ್ಚಕ್ಕೆ ಕೇವಲ ಶೇ.17.4 ರಷ್ಟು ಮೀಸಲಿಡಲಾಗಿದೆ. 71.36 ಸಾವಿರ ಕೋಟಿ ಬಂಡವಾಳ ವೆಚ್ಚದಲ್ಲಿ ಯಾವ ಆಸ್ತಿ ಸೃಜನೆ ಮಾಡಲು ಸಾಧ್ಯ?, ಸಾಲ ಮರುಪಾವತಿಗಾಗಿ 26,470 ಕೋಟಿ ರೂ. ಮೀಸಲಿಡಲಾಗಿದೆ. 19 ಸಾವಿರ ಕೋಟಿ ರಾಜಸ್ವ ಕೊರತೆಯಿದೆ. ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.
2021-22ನೇ ಸಾಲಿನಲ್ಲಿ ಕೋವಿಡ್ ನಂತರ ಸಂಕಷ್ಟ ಸಂದರ್ಭದಲ್ಲೂ ರಾಜ್ಯ ಸರ್ಕಾರ 80.641 ಕೋಟಿ ರೂ. ಸಾಲ ಮಾಡಿತ್ತು. 2022-23ನೇ ಸಾಲಿನಲ್ಲಿ 44,549 ಕೋಟಿ ರೂ., 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ 90,280 ಕೋಟಿ, ಕಳೆದ ಬಜೆಟ್‌ನಲ್ಲಿ 1.07 ಕೋಟಿ, ಮುಂದಿ ವರ್ಷಕ್ಕೆ 1.16 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ಸಾಲ ಪಡೆದು ಆಸ್ತಿ ಸೃಷ್ಟಿಸಬೇಕೆಂದು 2017ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಬಳಿಕ ಸಿದ್ದರಾಮಯ್ಯನವರೂ ಡಲ್ ಆಗಿದ್ದಾರೆ. ಅವರ ಬಜೆಟ್ ಕೂಡ ಡಲ್ ಆಗಿದೆ. ಈಗ ಸಾಲ ಮಾಡಿ ಅವರ ರಾಜಕೀಯ ಪ್ರಣಾಳಿಕೆಯ ಈಡೇರಿಕೆಗೆ ಖರ್ಚು ಮಾಡುತ್ತಿದ್ದಾರೆ. ಎಲ್ಲಾ ಉಚಿತ ಕೊಡಲು ಸಾಲದ ಹಣ ದುರ್ಬಳಕೆಯಾಗುತ್ತಿದ್ದು, ಇದು ಮೋಸ ಮತ್ತು ಅನ್ಯಾಯ ಎಂದು ದೂರಿದರು.
ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದು ಅಶೋಕ್ ಹೇಳುತ್ತಿದ್ದಂತೆಯೇ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪ್ರತಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ದೊರೆಯುತ್ತಿದೆ. ಇದು ಅಭಿವೃದ್ಧಿಯಲ್ಲವೇ ಎಂದು ಪ್ರಶ್ನಿಸಿದರು.
ಸಾಲದ ಮೊತ್ತವನ್ನೂ ಕಳೆದ ವರ್ಷ 1.81 ಲಕ್ಷ ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಷ್ಟು ಸಂಗ್ರಹವಾಗಿಲ್ಲ. ಮುಂದಿನ ವರ್ಷದಲ್ಲಿ 2.8 ಲಕ್ಷ ರೂ.ಕೋಟಿ ರೂ. ಆದಾಯದ ಗುರಿ ನಿಗದಿಪಡಿಸಲಾಗಿದೆ. ಅಭಿವೃದ್ಧಿ ಗುರಿಗಿಂತ ಅಬಕಾರಿ ಗುರಿ ಹೆಚ್ಚಾಗಿದೆ. ಜನರನ್ನು ಮದ್ಯಪಾನ ಪ್ರಿಯರನ್ನಾಗಿ ಮಾಡಲಾಗುತ್ತಿದೆ. 16ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ತುಂಬಾ ದುರ್ಬಲರಾಗಿದ್ದಾರೆ. ಮರ ಮುಪ್ಪಾದರೂ ಹುಳಿ ಮುಪ್ಪೇ? ಎಂಬ ಗಾದೆ ಮಾತು ಸಿದ್ದರಾಮಯ್ಯನವರಿಗೆ ಅನ್ವಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬುದನ್ನೂ ಹೇಳಬೇಕು. ಸಾಲದ ಹಣವನ್ನು ಆಸ್ತಿ ಸೃಜನೆಗೆ ಖರ್ಚು ಮಾಡಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ನಮ್ಮ ಸರ್ಕಾರ ವಿತ್ತೀಯ ಹೊಣೆಗಾರಿಕೆ ನಿಯಮಾವಳಿ ಅನುಸಾರವೇ ನಡೆದುಕೊಳ್ಳುತ್ತಿದೆ. ರೆವಿನ್ಯೂ ಸರ್‌ಪ್ಲಸ್ ಒಂದನ್ನು ಹೊರತುಪಡಿಸಿ ಉಳಿದಂತೆ ವಿತ್ತೀಯ ಕೊರತೆ ಮತ್ತು ಸಾಲ ಪ್ರಮಾಣ ಎರಡೂ ನಿಯಮಾವಳಿಗಳ ಅನುಸಾರದಲ್ಲಿಯೇ ಇದೆ ಎಂದು ಹೇಳಿದರು.
ಕಳೆದ ವರ್ಷ 27 ಸಾವಿರ ಕೋಟಿ ವಿತ್ತೀಯ ಕೊರತೆ ಇತ್ತು. ಈ ವರ್ಷ 19,262 ಕೋಟಿ ರೂ.ಗೆ ಇಳಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೂ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ, ಹಿಂದಿನ ಸರ್ಕಾರದಲ್ಲಿ ಹಳಿ ತಪ್ಪಿರುವ ರಾಜ್ಯದ ಆರ್ಥಿಕ ಶಿಸ್ತನ್ನು ನಮ್ಮ ಸರ್ಕಾರದಲ್ಲಿ ಸರಿಪಡಿಸುತ್ತಿದೆ. ಮುಂದಿನ ವರ್ಷ ರಾಜಸ್ವ ಕೊರತೆ ಆಗುವುದಿಲ್ಲ. ಶೇ.100ರಷ್ಟು ಉಳಿಕೆ ಬಜೆಟ್ ಮಂಡಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯರ ಟೀಕೆಗಳು, ಸಲಹೆ ಸೂಚನೆಗಳನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ಸರಿದಾರಿ ತೋರಲು ರಚನಾತ್ಮಕ ಟೀಕೆಗಳು ಇರಬೇಕು. ಸತ್ಯವನ್ನು ಮರೆಮಾಚಿ ಟೀಕೆ ಮಾಡಬಾರದು. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ. ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು. ದಾಖಲಾತಿಗಳನ್ನು ಸದನದ ಮುಂದಿಡಬೇಕು. ಈ ರೀತಿಯನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ.
ಸರ್ಕಾರದ ಕಳೆದೊಂದು ವರ್ಷದ ಪೂರ್ಣ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಪ್ರಸ್ತಾಪಿಸಲು ಸಾಧ್ಯವಿಲ್ಲದಿದ್ದರೂ, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. 2023ರ ಮೇ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಗೆಲ್ಲಿಸಿದರು. ಅದರ ನಂತರ 2024 ರಲ್ಲಿ ಲೋಕಸಭೆ ಚುನಾವಣೆ ನಡೆದು ಜನರು ಕಳೆದ ಬಾರಿಗಿಂತ ನಮಗೆ ಹೆಚ್ಚಿನ ಸ್ಥಾನಗಳಲ್ಲಿ ಆಶೀರ್ವಾದ ಮಾಡಿದ್ದಾರೆ. ನಂತರ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದೆವು.
ಕನ್ನಡ ನಾಡಿನ ಜನ ನಮ್ಮ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಿ 2022 ರಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಪಕ್ಷದಿಂದ ಘೋಷಿಸಿದ್ದೆವು. 2023ರಲ್ಲಿ ಜೂನ್ 11 ರಲ್ಲಿ ಶಕ್ತಿ ಯೋಜನೆಯನ್ನು, ಜುಲೈ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿಗಳನ್ನು ಜಾರಿ ಮಾಡಲಾಯಿತು. ಆಗಸ್ಟ್1 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಯನ್ನು ಜಾರಿ ಮಾಡಲಾಯಿತು. ಡಿಸೆಂಬರ್ ನಲ್ಲಿ ಶಿವಮೊಗ್ಗದಲ್ಲಿ ಯುವನಿಧಿಯನ್ನು ಪ್ರಾರಂಭಿಸಲಾಯಿತು. ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದ ಒಳಗೆಯೇ ಜಾರಿ ಮಾಡಲಾಯಿತು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಹಾಗೂ ರಾಜ್ಯದ ಬಿಜೆಪಿಯವರು ಸುಳ್ಳು ಸುಳ್ಳೆ ಟೀಕಿಸಿದರು. ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಬಿಜೆಪಿಯವರು ತಮ್ಮಚುನಾವಣಾ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ, ಅದರಲ್ಲಿ ಶೇ10 ರಷ್ಟು ಈಡೇರಿಸಲು ಸಾಧ್ಯವಾಗಲಿಲ್ಲ. ಇದೇ ಸದನದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆಗಳನ್ನು ಈಡೇರಿಸಲು, ಸಾಲ ಮನ್ನಾ ಮಾಡಲು ನಾವು ನೋಟ್ ಪ್ರಿಂಟ್ ಮೆಷಿನ್ ಇಟ್ಟಿಲ್ಲ ಎಂದಿದ್ದರು.
ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು 30 ರಿಂದ 20% ಗೆ ಇಳಿಸಿದ್ದು ನಿಜವಲ್ಲವೇ? ನಾನು ಮೊದಲ ಬಾರಿ ಮುಖ್ಯಮ೦ತ್ರಿಯಾಗಿದ್ದಾಗ ರೈತರ 50 ಸಾವಿರದವರೆಗಿನ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಿದ್ದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ.
ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು ಮದ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದರು. ನಮ್ಮ ಸರ್ಕಾರ ಜಾರಿಮಾಡಿರುವ ಐದು ಗ್ಯಾರಂಟಿಗಳು ಬಡವರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿತುಂಬಿದ ಯೋಜನೆಗಳು. ಇದನ್ನು ಪ್ರತಿಪಕ್ಷಗಳು ಒಪ್ಪಿಕೊಳ್ಳಲಿ.
ಗ್ಯಾರಂಟಿ ಯೋಜನೆಗಳು ಶಕ್ತಿ ನೀಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಶಕ್ತಿ ಯೋಜನೆಯಡಿ 409 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಓಡಾದಿದ್ದಾರೆ. ಇದು ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ನೀಡಿದ ಕಾರ್ಯಕ್ರಮ.1.26 ಕೋಟಿ ಕುಟು೦ಬಗಳಿಗೆ ಅನ್ನಭಾಗ್ಯದಡಿ 170 ರೂ.ಗಳನ್ನು ಡಿಬಿಟಿ ಮಾಡಲಾಗಿದೆ. 4 ಕೋಟಿಗೂ ಹೆಚ್ಚು ಜನ ಗ್ಯಾರಂಟಿಗಳಿಂದ ಲಾಭ ಪಡೆದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಜೀವನ ಸುಧಾರಿಸಿರುವ ಉದಾಹರಣೆಗಳಿವೆ. ಗೃಹಲಕ್ಷ್ಮಿಯ ಫಲಾನುಭವಿಯೊಬ್ಬರು ಈ ಯೋಜನೆಯಿ೦ದ 10 ರಿಂದ 20 ಸಾವಿರ ಉಳಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದರು, ಇನ್ನೊಬ್ಬರು ಸೊಸೆಗೆ ಬಳೆ ಅಂಗಡಿ ಇಟ್ಟುಕೊಟ್ಟಿದ್ದೇನೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಹೀಗೆ ನೂರಾರು ಉದಾಹರಣೆ ಕೊಡಬಲ್ಲೆ.
ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತಿದೆ. ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ದೇಶದ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ. ಮೊದಲ ವರ್ಗದಲ್ಲಿ 14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 15 ಸಾವಿರ ಡಾಲರ್ (13 ಲಕ್ಷ ರೂ.), 7 ಕೋಟಿ ಕುಟುಂಬಗಳ ತಲಾ ಆದಾಯ 3 ಸಾವಿರ ಡಾಲರ್ (2.62 ಲಕ್ಷ), 20.5 ಕೋಟಿ ಕುಟುಂಬಗಳ 100 ಕೋಟಿ ಜನರ ತಲಾ ಆದಾಯ 1 ಸಾವಿರ ಡಾಲರ್ (87 ಸಾವಿರ, ಅಂದರೆ ತಿಂಗಳಗೆ ಸುಮಾರು 7 ಸಾವಿರ), ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ.
143 ಕೋಟಿ ಜನ ಮುಖ್ಯವಾಹಿನಿಗೆ ತರುವ ವ್ಯವಸ್ಥೆಯೇನು? ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿಗಳು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಕ್ಯಾಮರೂನ್ ದೇಶದ ಪಿಲೆಮಾನ್ ಯಾಂಗ್ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಇದಕ್ಕಿಂತ ಶ್ಲಾಘನೆ ಬೇರೇನು ಬೇಕು? ಎಂದು ಹೇಳಿದರು.
ರಾಜ್ಯದ ತಲಾ ಆದಾಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 2022-23 ರಲ್ಲಿ ತಲಾ ಆದಾಯವು 4,58,789 ರೂ.ಗಳಷ್ಟಿತ್ತು. 2023-24 ರಲ್ಲಿ ಅದು 5,01383 ರೂ.ಗಳಿಗೆ ಏರಿತು. ಅದೇ ರೀತಿ, ಬೆಳಗಾವಿ, ಕಲಬುರಗಿ ಮತ್ತು ಇತರ ಪ್ರದೇಶಗಳಲ್ಲಿಯೂ ಇದು ಹೆಚ್ಚಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹಾಲು ಉತ್ಪಾದಕರಿಗೆ 700 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ನೀಡದಿರುವ ಬಗ್ಗೆ ಪ್ರತಿಪಕ್ಷಗಳು ಮುಖ್ಯಮಂತ್ರಿಗಳನ್ನು ಸಿಲುಕಿಸಲು ಪ್ರಯತ್ನಿಸಿದಾಗ, ಹಿಂದಿನ ಬಿಜೆಪಿ ಸರ್ಕಾರ 600 ಕೋಟಿ ರೂ.ಗಳನ್ನು ಪಾವತಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮುಂದಿನ ವರ್ಷದೊಳಗೆ ಎಲ್ಲಾ ಬಾಕಿಗಳನ್ನು ಪಾವತಿಸಲಾಗುವುದು ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಪ್ರೋತ್ಸಾಹ ಧನವನ್ನು 5 ರೂ.ಗಳಿಂದ 7 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು.
ನಂತರ, ಸಿಎಂ ಅವರ ಉತ್ತರದಿಂದ ತೃಪ್ತರಾಗಿಲ್ಲ ಎಂದು ಹೇಳಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡಿದೆ ಎಂದು ಸಿಎಂ ಆರೋಪಿಸಿದಾಗ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
Advertisement