
ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತಿಳಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ, 2025ರ ಜನವರಿ 3 ರಂದು ಚಂದ್ರಬಾಬು ನಾಯ್ದು ಅವರ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿರುವುದಾಗಿ ತಿಳಿಸಿದರು.
2025ರ ಫೆಬ್ರವರಿ 2 ರಂದು ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್ ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರ್ಕಾರ. 2025ರ ಫೆಬ್ರವರಿ 5 ರಂದು ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ? ಎಂದು ಪ್ರಶ್ನಿಸಿದರು.
ಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಮಾತ್ರವಲ್ಲ, ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ. ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು? ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ನಾವು ವಾಸ್ತವವನ್ನು ಹೇಳುತ್ತಿದ್ದೇವೆ ಎಂದರು.
ಸರ್ಕಾರದ ಕಾರ್ಯಕ್ರಮಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳು ಗ್ಯಾರಂಟಿಗಳನ್ನು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. 2020ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.
Advertisement