

ಸೂರತ್: ಸೂರತ್ ಮೂಲದ ಉದ್ಯಮಿ ಮತ್ತು ರಾಜ್ಯಸಭಾ ಸದಸ್ಯ ಗೋವಿಂದ್ ಧೋಲಾಕಿಯಾ ಅವರು ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ವಜ್ರಾಭರಣ ಮತ್ತು ಸೌರ ಫಲಕಗಳನ್ನು ಬಹುಮಾನ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಗೋವಿಂದ್ ಧೋಲಾಕಿಯಾ ಅವರು ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ದಕ್ಷಿಣ ಆಫ್ರಿಕಾದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಗೌರವ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಪತ್ರ ಬರೆದ ಧೋಲಾಕಿಯಾ ಅವರು, ಚಾಂಪಿಯನ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ "ಅವರ ಪ್ರತಿಭೆ ಮತ್ತು ಗೆಲುವಿಗೆ ಮೆಚ್ಚುಗೆಯ ಸಂಕೇತವಾಗಿ" "ವಜ್ರದ ಆಭರಣ" ವನ್ನು ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾದ ಧೋಲಾಕಿಯಾ, "ನಮ್ಮ ದೇಶಕ್ಕೆ ಬೆಳಕು ನೀಡಿದವರ ಬದುಕು ಸಹ ಸದಾ ಬೆಳಗುತ್ತಲೇ ಇರುಬೇಕು ಎಂಬ ಉದ್ದೇಶದಿಂದ ಅವರ ಮನೆಗಳಿಗೆ ಸೋಲಾರ್ ಫಲಕಗಳನ್ನು ಉಡುಗೊರೆಯಾಗಿ ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತವನ್ನು ಪ್ರತಿನಿಧಿಸುವ ಮಹಿಳಾ ಕ್ರಿಕೆಟಿಗರು ತಮ್ಮ ಧೈರ್ಯ, ಶಿಸ್ತು ಮತ್ತು ದೃಢಸಂಕಲ್ಪದಿಂದ ಈಗಾಗಲೇ ಶತಕೋಟಿ ಭಾರತೀಯರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಧೋಲಾಕಿಯಾ ಹೇಳಿದ್ದಾರೆ.
Advertisement