

ಮುಂಬೈ: ಸಾಕಷ್ಟು ಕುತೂಹಲ ಕೆರಳಿಸಿದ್ದ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ನಿರೀಕ್ಷೆಯಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಹುಮಾನ ಘೋಷಿಸಿದೆ.
ಹೌದು.. ನಿನ್ನೆ ತಡರಾತ್ರಿ ಭಾರತೀಯ ಕ್ರಿಕೆಟ್‌ಗೆ ಒಂದು ಮಹತ್ವದ ಕ್ಷಣವಾಗಿದ್ದು, ರಾಷ್ಟ್ರೀಯ ಮಹಿಳಾ ತಂಡವು ಭಾನುವಾರ ರಾತ್ರಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.
ಮಹಿಳಾ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಹುಮಾನ ಘೋಷಣೆ ಮಾಡಿದ್ದು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ವಿಜಯವನ್ನು "ಭಾರತೀಯ ಮಹಿಳಾ ಕ್ರಿಕೆಟ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಸ್ಮರಣೀಯ ಸಾಧನೆ" ಎಂದು ಶ್ಲಾಘಿಸಿದ್ದಾರೆ.
ಅಲ್ಲದೆ ಭಾರತ ತಂಡದ ಆಟಗಾರ್ತಿಯರಿಗೆ ಮತ್ತು ಸಹಾಯಕ ಸಿಬ್ಬಂದಿಗೆ 51 ಕೋಟಿ ರೂ. ಬಹುಮಾನವನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಂಡದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ್ದು, ಇದು ಭಾರತದ ಐಕಾನಿಕ್ 1983 ರ ಪುರುಷರ ವಿಶ್ವಕಪ್ ಗೆಲುವಿಗೆ ಸಮಾನಾಂತರವಾಗಿದೆ.
"ಭಾರತೀಯ ಮಹಿಳಾ ಕ್ರಿಕೆಟ್‌ಗೆ ಇದು ಸ್ಮರಣೀಯ ದಿನ. 1983 ರಲ್ಲಿ ಪುರುಷರ ತಂಡ ಸಾಧಿಸಿದ್ದನ್ನು, ಭಾರತೀಯ ಮಹಿಳೆಯರು ಇಂದು ಮುಂಬೈನಲ್ಲಿ ಮರುಸೃಷ್ಟಿಸಿದ್ದಾರೆ.
ಈ ಐತಿಹಾಸಿಕ ಗೆಲುವು ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಅಗಾಧ ಉತ್ತೇಜನ ನೀಡುತ್ತದೆ ಮತ್ತು ನಮ್ಮ ಆಟವು ಈಗ ಹೊಸ ಎತ್ತರವನ್ನು ತಲುಪುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಧುಮಾಲ್ ತಿಳಿಸಿದ್ದಾರೆ.
Advertisement