

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ನಿರ್ಣಾಯಕ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಎನ್ ಡಿಎ ಮೈತ್ರಿಕೂಟವು "160 ಕ್ಕೂ ಹೆಚ್ಚು ಸ್ಥಾನಗಳನ್ನು" ಗೆಲ್ಲುತ್ತದೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಮತ್ತೆ ಸರ್ಕಾರ ರಚಿಸುತ್ತದೆ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ.
"ನಾವು 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ಬಿಹಾರದಲ್ಲಿ ಸರ್ಕಾರ ರಚಿಸುತ್ತೇವೆ. ನಿತೀಶ್ ಕುಮಾರ್ ಇಲ್ಲಿ ಸಿಎಂ ಮತ್ತು ನರೇಂದ್ರ ಮೋದಿ ಅಲ್ಲಿ ಪ್ರಧಾನಿ. ಸಿಎಂ ಸ್ಥಾನ ಮತ್ತು ಪ್ರಧಾನಿ ಸ್ಥಾನ ಎರಡೂ ಖಾಲಿ ಇಲ್ಲ" ಎಂದರು.
ಬಿಹಾರ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಪ್ರಧಾನಿ "ಮತಗಳಿಗಾಗಿ ನೃತ್ಯ ಮಾಡಬಹುದು" ಎಂಬ ರಾಹುಲ್ ಗಾಂಧಿ ಹೇಳಿಕೆ ಮತ್ತು ಮೋದಿ ಅವರ ಪ್ರಚಾರವನ್ನು "ಮದುವೆ ಸಂಭ್ರಮ"ಕ್ಕೆ ಹೋಲಿಸಿದ ಖರ್ಗೆ ಅವರ ಹೇಳಿಕೆ "ಕಾಂಗ್ರೆಸ್‌ನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಟೀಕಿಸಿದರು.
"ಮನಮೋಹನ್ ಸಿಂಗ್ ಪ್ರಧಾನಿಯಾದಾಗ, ಅವರು ಸಾರ್ವಜನಿಕರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿ ಪ್ರಚಾರ ಮಾಡಬಾರದು ಎಂದು ಹೇಳುವುದು ಕಾಂಗ್ರೆಸ್ ನ ಒಂದು ಫ್ಯಾಷನ್ ಆಗಿದೆ. ಪ್ರಧಾನಿ ಏಕೆ ಪ್ರಚಾರ ಮಾಡಬಾರದು? ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವುದು ಪ್ರತಿಯೊಬ್ಬ ನಾಯಕನ ಕರ್ತವ್ಯವಾಗಿದೆ" ಎಂದು ಶಾ ತಿರುಗೇಟು ನೀಡಿದರು.
"ಪ್ರತಿ ಬಾರಿಯೂ, ಕಾಂಗ್ರೆಸ್ ಮೋದಿ ಜಿ ವಿರುದ್ಧ ನಿಂದನೀಯ ಭಾಷೆ ಬಳಸುತ್ತದೆ. ಅದು ಮಣಿಶಂಕರ್ ಅಯ್ಯರ್ ಆಗಿರಲಿ ಅಥವಾ ಇತರರಾಗಿರಲಿ, ಮತ್ತು ಪ್ರತಿ ಬಾರಿಯೂ, ಈ ದೇಶದ ಜನ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಪಾಠ ಕಲಿಸಿದ್ದಾರೆ. ಈ ಬಾರಿಯೂ ಅವರಿಗೆ ತಿರುಗುಬಾಣವಾಗುತ್ತದೆ" ಎಂದು ಅವರು ಹೇಳಿದರು.
Advertisement